3 ಸಿಕ್ಸರ್ ಸಿಡಿಸಿದ ರಶೀದ್ ಖಾನ್: ತಾಳ್ಮೆ ಕಳೆದುಕೊಂಡ ಮುತ್ತಯ್ಯ ಮುರಳೀಧರನ್
ಹೈದರಾಬಾದ್: ಐಪಿಎಲ್ 15ನೇ ಆವೃತ್ತಿಯ ಅತ್ಯಂತ ರೋಚಕ ಪಂದ್ಯ ಬುಧವಾರ ರಾತ್ರಿ ನಡೆದಿದೆ. ಟೂರ್ನಿಯ ಎರಡು ಬಲಿಷ್ಠ ತಂಡಗಳಾಗಿರುವ ಗುಜರಾತ್ ಟೈಟನ್ಸ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ನಡುವಿನ ಪಂದ್ಯ ಅಂತಿಮ ಎಸೆತದಲ್ಲಿ ಸಿಕ್ಸರ್ ಮೂಲಕ ಫಲಿತಾಂಶ ಹೊರಬಿತ್ತು. ರಶೀದ್ ಖಾನ್ ಅಂತಿಮ ಓವರ್‌ನ ಕೊನೆಯ ನಾಲ್ಕು ಎಸೆತಗಳಲ್ಲಿ 3 ಸಿಕ್ಸರ್ ಬಾರಿಸುವ ಮೂಲಕ ರಶೀದ್ ಖಾನ್ ಗುಜರಾತ್ ಟೈಟನ್ಸ್ ತಂಡದ ಗೆಲುವಿಗೆ ಕಾರಣವಾದರು.
ಈ ಅಂತಿಮ ಓವರ್‌ನಲ್ಲಿ ರಶೀದ್ ಖಾನ್ ಸಿಕ್ಸರ್ ಮೇಲೆ ಸಿಕ್ಸರ್ ಬಾರಿಸುತ್ತಿದ್ದರೆ ಎದುರಾಳಿ ಸನ್‌ರೈಸರ್ಸ್ ಹೈದರಾಬಾದ್ ತಂಡದ ಕೋಚ್ ಮುತ್ತಯ್ಯ ಮುರಳೀಧರನ್ ತಾಳ್ಮೆ ಕಳೆದುಕೊಂಡು ಕಿರುಚಾಡಿದ್ದು ಕ್ಯಾಮರಾದಲ್ಲಿ ಸೆರೆಯಾಗಿದೆ. ಸದಾ ಶಾಂತಚಿತ್ತದಿಂದ ಇರುವ ದಿಗ್ಗಜ ಕ್ರಿಕೆಟಿಗ ಮುರಳೀಧರನ್ ತಾಳ್ಮೆ ಕಳೆದುಕೊಂಡ ದೃಶ್ಯ ಅಭಿಮಾನಿಗಳಿಗೂ ಅಚ್ಚರಿಯುಂಟು ಮಾಡಿದೆ.
ರಶೀದ್ ಖಾನ್ ಐದನೇ ಎಸೆತವನ್ನು ಸಿಕ್ಸರ್‌ಗೆ ಅಟ್ಟುತ್ತಿದ್ದಂತೆಯೇ ಡಗೌಟ್‌ನಲ್ಲಿ ಕುಳಿತಿದ್ದ ಸನ್‌ರೈಸರ್ಸ್ ಹೈದರಾಬಾದ್ ತಮಡದ ಕೋಚ್ ಮುತ್ತಯ್ಯ ಮುರಳೀಧರನ್ ಸಿಟ್ಟಿನಿಂದ ಎದ್ದು ಬೌಲಿಂಗ್ ನಡೆಸುತ್ತಿದ್ದ ಮಾರ್ಕೋ ಜಾನ್ಸನ್ ಮೇಲೆ ಕಿಡಿ ಕಾರಿದ್ದಾರೆ. ದಿಗ್ಗಜ ಕ್ರಿಕೆಟಿಗ ಈ ರೀತಿ ತಾಳ್ಮೆ ಕಳೆದುಕೊಂಡಿದ್ದು ನೋಡಿ ಅಭಿಮಾನಿಗಳು ಅಚ್ಚರಿ ಪಟ್ಟಿದ್ದಾರೆ.





