ಸೋಮೇಶ್ವರದ ಕುಂಪಲ, ಪಿಲಾರು ಪ್ರದೇಶದಲ್ಲಿ ಚಿರತೆ ಪ್ರತ್ಯಕ್ಷ ಸ್ಥಳೀಯರಲ್ಲಿ ಆತಂಕ:
ಚಿರತೆಯನ್ನ ಪ್ರತ್ಯಕ್ಷ ಕಂಡ ಪಿಲಾರು ನಿವಾಸಿ
ಉಳ್ಳಾಲ: ಸೋಮೇಶ್ವರ ಪುರಸಭಾ ವ್ಯಾಪ್ತಿಯ ಕುಂಪಲ,ಪಿಲಾರು ಪಳ್ಳ ಪ್ರದೇಶದಲ್ಲಿ ಚಿರತೆ ಸಂಚರಿಸುವುದನ್ನ ವ್ಯಕ್ತಿಯೋರ್ವರು ಪ್ರತ್ಯಕ್ಷ ಕಂಡಿದ್ದು ಸ್ಥಳೀಯರಲ್ಲಿ ಆತಂಕ ಮನೆ ಮಾಡಿದೆ.
ಕುಂಪಲ ಬಾಲಕೃಷ್ಣ ಮಂದಿರ ,ಸರಳಾಯ ಕೊಲನಿಯಲ್ಲಿ ಎರಡು ದಿವಸಗಳ ಹಿಂದೆಯೇ ಚಿರತೆ ಸಂಚರಿಸುತ್ತಿರುವುದರ ಬಗ್ಗೆ ಸುದ್ದಿಯಾಗಿದ್ದು ಸ್ಥಳೀಯರಲ್ಲಿ ಚಿರತೆಯ ಗುಮ್ಮ ಮನೆ ಮಾಡಿತ್ತು.ಕುಂಪಲ ಪ್ರದೇಶದಲ್ಲಿ ಬೀದಿ ನಾಯಿಗಳ ಸಂಖ್ಯೆ ಜಾಸ್ತಿಯಾಗಿದ್ದು ನಾಯಿಗಳ ಮಾಂಸ ಅರಸಿ ಚಿರತೆ ಬಂದಿದೆಯೋ ಎಂದು ಕುಂಪಲದ ಜನರು ಹೇಳುತ್ತಿದ್ದರು.
ನಿನ್ನೆ ರಾತ್ರಿ ಕುಂಪಲ ಸಮೀಪದ ಪಿಲಾರು ಪಳ್ಳ ಎಂಬ ಗುಡ್ಡ ಪ್ರದೇಶದಲ್ಲಿ ವ್ಯಕ್ತಿಯೋರ್ವರು ಚಿರತೆಯನ್ನ ಕಣ್ಣಾರೆ ಕಂಡಿದ್ದು ಸ್ಥಳೀಯರಲ್ಲಿ ಆತಂಕ ಇನ್ನಷ್ಟು ಹೆಚ್ಚುವಂತೆ ಮಾಡಿದೆ.ಪಿಲಾರು ಪಳ್ಳ ನಿವಾಸಿ ಶಿವರಾಜ್ ಪೊಣ್ಣು ಸ್ವಾಮಿ ಎಂಬವರು ನಿನ್ನೆ ರಾತ್ರಿ 9.30 ಗಂಟೆ ಸುಮಾರಿಗೆ ತನ್ನ ಮನೆಯಿಂದ ಮಗಳ ಮನೆಗೆ ತೆರಳುತ್ತಿದ್ದ ವೇಳೆ ಮನೆಯ ಬಳಿಯೇ ಚಿರತೆಯೊಂದು ರಸ್ತೆ ದಾಟಿ ಪೊದೆಯೊಳಗೆ ನುಗ್ಗಿದನ್ನ ಕಣ್ಣಾರೆ ಕಂಡಿದ್ದಾರೆ.
ಮೊದಲಿಗೆ ಶಿವರಾಜ್ ಅವರು ಬೆಕ್ಕೆಂದು ಗ್ರಹಿಸಿದರೂ ಅದರ ಉದ್ದನೆಯ ಬಾಲ ಮತ್ತು ರಂಗನ್ನ ಕಂಡು ಸಣ್ಣ ಗಾತ್ರದ ಚಿರತೆಯೆಂದು ಮನದಟ್ಟು ಮಾಡಿದ್ದಾರೆ.ನಿನ್ನೆ ರಾತ್ರಿ ಮಳೆ ಸುರಿದುದರಿಂದ ಚಿರತೆಯ ಹೆಜ್ಜೆ ಗುರುತು ಮಾಸಿದೆ.
ಕುಂಪಲದಲ್ಲಿ ಚಿರತೆ ಇರುವ ಗುಮ್ಮಕ್ಕೆ ಇದೀಗ ಪ್ರತ್ಯಕ್ಷ ಸಾಕ್ಷಿ ದೊರೆತ್ತಿದ್ದು ಸ್ಥಳೀಯರಲ್ಲಿ ಇನ್ನಷ್ಟು ಆತಂಕ ಹೆಚ್ಚಿದೆ.ಪಿಲಾರು ಪಳ್ಳದ ಸರಳಾಯ ಕಾಲನಿ ಹತ್ತಿರ ವಿಶಾಲ ಗುಡ್ಡ ಪ್ರದೇಶವಿದ್ದು ಕಾಡು ಇದೆ.ಇಲ್ಲಿ ಕಾಡು ಹಂದಿ,ಮುಳ್ಳು ಹಂದಿ,ನವಿಲು,ಉಡ ಮುಂತಾದ ವಣ್ಯ ಜೀವಿಗಳು ಸದಾ ಸಂಚರಿಸುತ್ತಿರುತ್ತವೆ ಎಂದು ಸ್ಥಳೀಯ ಸಮಾಜ ಸೇವಕರಾದ ಉದಯಗಟ್ಟಿ ಪಿಲಾರು ತಿಳಿಸಿದ್ದಾರೆ.
ಅರಣ್ಯ ಇಲಾಖೆಯವರಿಗೆ ಕುಂಪಲದಲ್ಲಿ ಚಿರತೆ ಇರುವಿಕೆಯ ಬಗ್ಗೆ ಯಾವುದೇ ದೂರು ಬಂದಿಲ್ಲವೆಂದು ಅಧಿಕಾರಿಗಳು ತಿಳಿಸಿದ್ದಾರೆ.