ಬಾಳೆಹಿತ್ಲು: ಪತಿಗೆ ಅಪಘಾತ, ಚಿಕಿತ್ಸೆಗೆ ಹಣವಿಲ್ಲವೆಂದು ಬೇಸತ್ತ ಪತ್ನಿ ಆತ್ಮಹತ್ಯೆ
ಕಾರ್ಕಳ: ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದ ಪತಿಯ ಚಿಕಿತ್ಸೆಗೆ ಆರ್ಥಿಕ ಅಡಚಣೆ ಎದುರಾಗಿದೆ ಎಂಬ ಸಂಕಷ್ಟದಲ್ಲಿ ಪತ್ನಿ ಬಾವಿಗೆ ಹಾರಿ ಆತ್ಮಹತ್ಯೆ ಗೈದ ಘಟನೆ ಅಜೆಕಾರು ಸಮೀಪದ ಅಂಡಾರು ಬಾಳೆಹಿತ್ಲು ಎಂಬಲ್ಲಿ ನಡೆದಿದೆ.
ಹಿರ್ಗಾನದಲ್ಲಿ ಎಪ್ರಿಲ್ 9ರಂದು ರಸ್ತೆ ಅಪಘಾತದಲ್ಲಿ ಸತೀಶ್ ಎನ್. ರಾವ್ ಗಂಭೀರ ಸ್ವರೂಪದಲ್ಲಿ ಗಾಯಗೊಂಡಿದ್ದರು. ವೃತ್ತಿಯಲ್ಲಿ ಅವರು ರಿಕ್ಷಾ ಚಾಲಕನಾಗಿದ್ದಾರೆ.
ಗಾಯಾಳು ಸತೀಶ್ ಮಣಿಪಾಲದ ಕೆಎಂಸಿ ಆಸ್ಪತ್ರೆಯ ತೀವ್ರ ನಿಗಾ ವಿಭಾಗದಲ್ಲಿ ದಾಖಲಾಗಿದ್ದರು. ಎಪ್ರಿಲ್ ೧೩ರಂದು ಗಾಯಾಳುವಿಗೆ ಶಸ್ತ್ರಚಿಕಿತ್ಸೆ ನಡೆಸಬೇಕೆಂದು ವೈದ್ಯರು ಸಲಹೆ ನೀಡಿದ್ದರು.
ಇದರಿಂದ ಗಾಯಾಳುವಿನ ಪತ್ನಿ ವನಿತಾ ಮಾನಸಿಕವಾಗಿ ಖಿನ್ನತೆಗೆ ಒಳಗಾಗಿದ್ದರು. ಶಸ್ತ್ರ ಚಿಕತ್ಸೆಗೆ ಅಗತ್ಯವಾದ ಹಣವಿಲ್ಲ ಎಂಬ ಕೊರಗಿನಲ್ಲಿ ರಾತ್ರಿ ಪೂರ್ತಿ ಮಲಗದೇ ಬೊಬ್ಬೆ ಹಾಕುತ್ತಿದ್ದರೆಂದು ತಿಳಿದುಬಂದಿದೆ.




