ತಲಪಾಡಿ: ಕಳೆದ ಎರಡು ದಿನಗಳಿಂದ ಪೂರೈಕೆಯಾಗದ ಕುಡಿಯುವ ನೀರು: ನಿವಾಸಿಗಳ ಪರದಾಟ

ಬಂಟ್ವಾಳ: ಬಂಟ್ವಾಳ ತಾಲುಕಿನ ಪುರಸಭಾ ವ್ಯಾಪ್ತಿಯ ತಲಪಾಡಿ ವಾರ್ಡ್ ನಲ್ಲಿ ಕಳೆದ ಎರಡು ದಿನಗಳಿಂದ ಕುಡಿಯುವ ನೀರು ಪೂರೈಕೆ ಆಗದೆ ಕುಡಿಯುವ ನೀರಿನ ಬವಣೆಯಿಂದ ನಿವಾಸಿಗಳು ಪರದಾಡುವಂತಾಗಿದೆ.
ಪುರಸಭಾ ವ್ಯಾಪ್ತಿಯ ತಲಪಾಡಿಯಲ್ಲಿ ನೂರಾರು ಮನೆಗಳಿದ್ದು, ಕಳೆದ ಎರಡು ದಿನಗಳಿಂದ ಕುಡಿಯುವ ನೀರಿನ ಪೂರೈಕೆ ಆಗದೆ ಇಲ್ಲಿನ ನಿವಾಸಿಗಳು ಹನಿ ನೀರಿಗಾಗಿ ಅಲೆದಾಡುವಂತಾಗಿದೆ.
ಕುಡಿಯುವ ನೀರಿನ ಪೈಪ್ ಒಡೆದು ಹೋಗಿರುವ ಕಾರಣ ಈ ಸಮಸ್ಯೆ ಎದುರಾಗಿದೆ ಎಂದು ಹೇಳುತ್ತಿದ್ದಾರರೂ ಈವರೆಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿಲ್ಲ. ಪುರಸಭೆ ಹಾಗೂ ಪುರಸಭಾ ಸದಸ್ಯರು ಸಮಸ್ಯೆಯನ್ನು ನೀಗಿಸುವಲ್ಲಿ ಮುಂದಾಗದೆ ಕಣ್ಣು ಮುಚ್ಚಿ ಕುಳಿತಿದೆ ಎಂದು ಪುರವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕರೆ ಸ್ವೀಕರಿಸಿದ ಪುರಸಭಾ ಸದಸ್ಯ:
ನೀರಿನ ಸಮಸ್ಯೆಯ ಬಗ್ಗೆ ಸಂಬಂಧಪಟ್ಟ ವಾರ್ಡ್ ನ ಪುರಸಭಾ ಸದಸ್ಯರಿಗೆ ಕರೆ ಮಾಡಿದರೂ ಕರೆ ಸ್ವೀಕರಿಸುತ್ತಿಲ್ಲ. ನಮ್ಮ ಸಮಸ್ಯೆಯನ್ನು ಯಾರಿಗೆ ಹೇಳಬೇಕು ಎಂದು ಪುರವಾಸಿಗಳು ಅಳಲನ್ನು ತೋಡಿ ಕೊಂಡಿದ್ದಾರೆ.
ಗುಳೆ ಹೊರಟ ನಿವಾಸಿಗಳು:
ಎರಡು ದಿನಗಳಿಂದ ನೀರಿನ ಸಮಸ್ಯೆ ಉಲ್ಬಣಗೊಂಡಿದ್ದರಿಂದ ತಲಪಾಡಿ ವಾರ್ಡ್ ನ ನಿವಾಸಿಗಳು ತಮ್ಮ ತಮ್ಮ ಸಂಬಂಧಿಕರ ಮನೆಗೆ ಗುಳೆ ಹೊರಟಿದ್ದಾರೆ.
ಪ್ರತಿಭಟನೆಯ ಎಚ್ವರಿಕೆ:
ನೀರಿನ ಸಮಸ್ಯೆಗೆ ಪರಿಹಾರ ನೀಡದಿದ್ದರೆ ಹಾಗೂ ಟ್ಯಾಂಕರ್ ಮೂಲಕ ಪರ್ಯಾಯ ವ್ಯವಸ್ಥೆ ಕಲ್ಪಿಸದಿದ್ದರೆ ಪುರಸಭಾ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡಲಾಗುವುದು ಎಂದು ಇಲ್ಲಿನ ಪುರವಾಸಿಗಳು ಎಚ್ಚರಿಸಿದ್ದಾರೆ.