ಪಡೀಲ್: ನಿರ್ಮಾಣ ಹಂತದಲ್ಲಿರುವ ಬಹು ಮಹಡಿ ಕಟ್ಟಡದಿಂದ ಬಿದ್ದು ಯುವಕ ಮೃತ್ಯು
ಮಂಗಳೂರು: ನಗರದ ಪಡೀಲ್ ಬಳಿ ನಿರ್ಮಾಣ ಹಂತದಲ್ಲಿರುವ ಬಹು ಮಹಡಿ ಕಟ್ಟಡದಿಂದ ಕಾರ್ಮಿಕ ಯುವಕನೊಬ್ಬ ಆಯ ತಪ್ಪಿ ಕೆಳಗೆ ಬಿದ್ದು ಮೃತಪಟ್ಟ ಘಟನೆ ಸೋಮವಾರ ನಡೆದಿದೆ.
ಬಂಟ್ವಾಳ ತಾಲೂಕಿನ ಮಣಿನಾಲ್ಕೂರು ಗ್ರಾಮದ ಪುಣ್ಕೆದಡಿ ನಿವಾಸಿ ವಿಜಯ್ (22) ಮೃತ ಪಟ್ಟ ಯುವಕನಾಗಿದ್ದಾನೆ.
ವಿಜಯ್ ಮತ್ತಿತರ ಇಬ್ಬರು ನಿರ್ಮಾಣ ಹಂತದಲ್ಲಿರುವ ಕಟ್ಟಡದ 4ನೇ ಮಹಡಿಯಲ್ಲಿ ಫ್ಯಾಬ್ರಿಕೇಶನ್ ಕೆಲಸ ಮಾಡುತ್ತಿದ್ದರು. ಮಧ್ಯಾಹ್ನ ಸುಮಾರು 12.30ಕ್ಕೆ ವಿಜಯ್ ಆಕಸ್ಮಿಕವಾಗಿ ಆಯ ತಪ್ಪಿ ಕೆಳಗೆ ಬಿದ್ದಿದ್ದಾರೆ.
ತಲೆ ಮತ್ತು ದೇಹದ ಇತರ ಭಾಗಗಳಿಗೆ ಗಂಭೀರ ಗಾಯಗೊಂಡಿದ್ದ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿದರೂ ಅದಾಗಲೇ ಅವರು ಕೊನೆಯುಸಿರೆಳೆದಿದ್ದರು. ಈ ಬಗ್ಗೆ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





