4ನೇ ದಿನವೂ ಪೆಟ್ರೋಲ್, ಡೀಸೆಲ್ ದರದಲ್ಲಿ ಹೆಚ್ಚಳ
ನವದೆಹಲಿ: ಪೆಟ್ರೋಲ್ ಮತ್ತು ಡೀಸೆಲ್ ದರವು ಶನಿವಾರ ಲೀಟರ್‌ಗೆ ತಲಾ 80 ಪೈಸೆಯಷ್ಟು ಏರಿಕೆಯಾಗಿದೆ. ಕಳೆದ ಐದು ದಿನಗಳಲ್ಲಿ ನಾಲ್ಕನೇ ಬಾರಿಗೆ ದರ ಏರಿಕೆಯಾಗಿದೆ. ಈ ಹಿಂದೆ ಮಂಗಳವಾರ, ಬುಧವಾರ ಮತ್ತು ಶುಕ್ರವಾರ ದರ ಏರಿಸಲಾಗಿತ್ತು.
ದೆಹಲಿಯಲ್ಲಿ ಈಗ ಪ್ರತಿ ಲೀಟರ್ ಪೆಟ್ರೋಲ್ ದರ ₹ 98.61 ಮತ್ತು ಡೀಸೆಲ್ ದರ 89.87 ತಲುಪಿದೆ. ಸುಮಾರು ನಾಲ್ಕೂವರೆ ತಿಂಗಳ ಅಂತರದ ಬಳಿಕ ಮಾರ್ಚ್ 22ರಿಂದ ಪೆಟ್ರೋಲ್, ಡೀಸೆಲ್ ದರ ಹೆಚ್ಚಿಸಲಾಗುತ್ತಿದೆ. ಐದು ದಿನಗಳಲ್ಲಿ ತೈಲ ದರ ಪ್ರತಿ ಲೀಟರ್‌ಗೆ ಒಟ್ಟು ₹ 3.20 ರಷ್ಟು ಹೆಚ್ಚಳ ಕಂಡಿದೆ.
ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಕಚ್ಚಾ ತೈಲದ ಬೆಲೆಗೆ ಅನುಗುಣವಾಗಿ ದೇಶಿ ಮಾರುಕಟ್ಟೆಯಲ್ಲಿ ಪೆಟ್ರೋಲ್ ಬೆಲೆ ನಿಗದಿ ಮಾಡುವ ವ್ಯವಸ್ಥೆಯು 2017ರ ಜೂನ್‌ನಲ್ಲಿ ಜಾರಿಗೆ ಬಂತು.
ಉತ್ತರ ಪ್ರದೇಶ ಮತ್ತು ಪಂಜಾಬ್‌ನಂತಹ ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆಗೆ ಮುನ್ನ ನವೆಂಬರ್ 4 ರಿಂದ ಬೆಲೆಗಳು ಸ್ಥಿರವಾಗಿದ್ದವು. ಈ ಅವಧಿಯಲ್ಲಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರೆಲ್‌ಗೆ ಸುಮಾರು 30 ಡಾಲರ್‌ನಷ್ಟು ಏರಿಕೆಯಾಗಿದೆ.
ಮಾರ್ಚ್ 10 ರಂದು ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಟಕವಾದ ಬಳಿಕ ದರ ಪರಿಷ್ಕರಣೆಯನ್ನು ನಿರೀಕ್ಷಿಸಲಾಗಿತ್ತು. ಆದರೆ ಅದನ್ನು ಮುಂದೂಡಲಾಯಿತು.
ನವೆಂಬರ್ ಆರಂಭದಲ್ಲಿ ಕಚ್ಚಾ ತೈಲದ ಪ್ರತಿ ಬ್ಯಾರೆಲ್‌ಗೆ 117 ಡಾಲರ್‌ನಷ್ಟು ಏರಿಕೆಯಾಗಿದ್ದರೂ ಕೂಡ 137 ದಿನಗಳ ಕಾಲ ಪೆಟ್ರೋಲ್ ಮತ್ತು ಡೀಸೆಲ್ ದರಗಳನ್ನು ತೈಲ ಕಂಪನಿಗಳು ಪರಿಷ್ಕರಿಸಿರಲಿಲ್ಲ. ಇದೀಗ ತೈಲ ಕಂಪನಿಗಳು ಚುನಾವಣೆಗೂ ಮುನ್ನ ದರ ಹೆಚ್ಚಳವನ್ನು ತಡೆ ಹಿಡಿಯುವ ಮೂಲಕ ಆಗಿದ್ದ ನಷ್ಟವನ್ನು ಸರಿದೂಗಿಸಿಕೊಳ್ಳಲು ಮುಂದಾಗಿವೆ.




