February 2, 2026

ಬಪ್ಪನಾಡು ದೇವಸ್ಥಾನ ಜಾತ್ರಾ ಮಹೋತ್ಸವದಲ್ಲಿ ಮುಸ್ಲಿಮರಿಗೆ ವ್ಯಾಪಾರ ನಡೆಸಲು ನಿರಾಕರಣೆ ಅಳವಡಿಸಿದ್ದ ವಿಚಾರ: ಬ್ಯಾನರ್ ಗೂ ನಮಗೂ ಸಂಬಂಧವಿಲ್ಲ ಆಡಳಿತ ಮಂಡಳಿ ಸ್ಪಷ್ಟನೆ

0
image_editor_output_image-2082212761-1648005992083

ಮಂಗಳೂರು : ಬಪ್ಪನಾಡು ದುರ್ಗಾಪರಮೇಶ್ವರಿ ದೇವಸ್ಥಾನದ ಜಾತ್ರಾ ಮಹೋತ್ಸವದ ವ್ಯಾಪಾರಕ್ಕೆ‌ ಸಂಬಂದಿಸಿದ ಬ್ಯಾನರ್ ಬಗ್ಗೆ ದೇವಾಲಯದ ಆಡಳಿತ ಮೊಕ್ತೇಸರರು ಪ್ರತಿಕ್ರಿಯಿಸಿದ್ದು, ಬ್ಯಾನರ್ ಗೂ ನಮಗೂ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ದೇವಸ್ಥಾನದ ಮೊಕ್ತೇಸರರಾದ ದುಗ್ಗಣ್ಣ ಸಾವಂತರು ಈ‌‌ ಬಗ್ಗೆ ಮಾತನಾಡಿ, ಬ್ಯಾನರ್ ಗೂ ದೇವಸ್ಥಾನಕ್ಕೂ ಯಾವುದೇ ಸಂಬಂಧವಿಲ್ಲ. ದೇವಸ್ಥಾನದ ವತಿಯಿಂದ ನಾವು ಈ ಬ್ಯಾನರನ್ನು ಹಾಕಿಲ್ಲ. ಮುಸ್ಲಿಮರು ಜಾತ್ರಾ ಮಹೋತ್ಸವದಲ್ಲಿ ವ್ಯಾಪಾರ-ವಹಿವಾಟು ನಡೆಸುವ ಕುರಿತು ದೇವಸ್ಥಾನದ ವತಿಯಿಂದ ಯಾವುದೇ ನಿರ್ಬಂಧ ವಿಧಿಸಿಲ್ಲ ಎಂದು ಹೇಳಿದ್ದಾರೆ.

ಜಾತ್ರಾ ಮಹೋತ್ಸವದಲ್ಲಿ ಅಹಿತಕರ ಘಟನೆಗಳು ನಡೆಯಬಾರದು ಎಂಬ ಉದ್ದೇಶದಿಂದ ಕೆಲವು ಮುಸ್ಲಿಮರು ಹಾಕಿದ್ದ ಅಂಗಡಿಗಳನ್ನು ಅವರು ತೆರವುಗೊಳಿಸಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಆಡಳಿತ ಮೊಕ್ತೇಸರರಾದ ಎಂ.ಎಸ್. ಮನೋಹರ ಶೆಟ್ಟಿ ಅವರು, ಯಾವುದೇ ಧರ್ಮದವರು ವ್ಯಾಪಾರ ವಹಿವಾಟು ನಡೆಸುವ ಬಗ್ಗೆ ದೇವಸ್ಥಾನದ ಕಡೆಯಿಂದ ಯಾವುದೇ ನಿರ್ಬಂಧವಿಲ್ಲ. ಅಹಿತಕರ ಘಟನೆಗಳು ನಡೆದರೆ ಎಲ್ಲರಿಗೂ ರಕ್ಷಣೆ ಕೊಡಲು ಸಾಧ್ಯವಾಗುವುದಿಲ್ಲ‌ ಎಂದು ಹೇಳಿದ್ದಾರೆ.

ಈ ಹಿನ್ನೆಲೆಯಲ್ಲಿ ವ್ಯಾಪಾರಕ್ಕೆಂದು ಬರುವ ಎಲ್ಲರಿಗೂ ಪರಿಸ್ಥಿತಿಯನ್ನು ಮನವರಿಕೆ ಮಾಡಿ ಬಳಿಕ ಅವರು ಒಪ್ಪಿಗೆ ನೀಡಿದರೆ ವ್ಯಾಪಾರಕ್ಕೆ ಪರವಾನಿಗೆ ನೀಡಲಾಗುವುದು ಎಂದು ಹೇಳಿದ್ದಾರೆ.

ಇತ್ತೀಚೆಗೆ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಬಳಿ ಮತ್ತು ಬಸ್ಸು ನಿಲ್ದಾಣದಲ್ಲಿ ಜಾತ್ರಾ ಮಹೋತ್ಸವದಲ್ಲಿ ಮುಸ್ಲಿಮರಿಗೆ ವ್ಯಾಪಾರ ಮಾಡಲು ಅವಕಾಶವಿಲ್ಲ ಎಂಬ ಅರ್ಥದಲ್ಲಿ ದೇವಸ್ಥಾನದ ಆಡಳಿತ ಮಂಡಳಿಯ ಹೆಸರಿನಲ್ಲಿ ಬ್ಯಾನರ್ ಗಳನ್ನು ಅಳವಡಿಸಲಾಗಿತ್ತು. ಈ ಬಗ್ಗೆ ಬೆಳಗ್ಗೆ ತುರ್ತು ಸಭೆ ನಡೆಸಿದ ಆಡಳಿತ ಮಂಡಳಿ, ಆ ಬ್ಯಾನರ್ ಗಳನ್ನು ತೆರವು ಮಾಡಿತ್ತು. ಆ ಬಳಿಕ ದುಷ್ಕರ್ಮಿಗಳು ʼಸಮಸ್ತ ಹಿಂದೂ ಬಾಂಧವರುʼ ಎಂಬ ಹೆಸರಿನಲ್ಲಿ ಮತ್ತೊಂದು‌ ಬ್ಯಾನರನ್ನು ಅಳವಡಿಸಿದ್ದಾರೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *

error: Content is protected !!