ಪಠ್ಯ ಪುಸ್ತಕದಲ್ಲಿ ಭಗವದ್ಗೀತೆ ಸೇರಿಸುವ ಯಾವ ಪ್ರಸ್ತಾಪವೂ ಸರಕಾರದ ಮುಂದೆ ಇಲ್ಲ: ಜೆ.ಸಿ ಮಾಧುಸ್ವಾಮಿ
ಮೈಸೂರು: ಪಠ್ಯ ಪುಸ್ತಕದಲ್ಲಿ ಭಗವದ್ಗೀತೆ ಸೇರಿಸುವ ವಿಚಾರದ ಯಾವ ಪ್ರಸ್ತಾಪವೂ ಸರಕಾರದ ಮುಂದೆ ಇಲ್ಲ. ಪ್ರಸ್ತಾಪವೇ ಇಲ್ಲವೆಂದ ಮೇಲೆ ಚರ್ಚೆ ಯಾಕೆ? ಈ ಬಗ್ಗೆ ಶಿಕ್ಷಣ ಸಚಿವರೇ ಸ್ಪಷ್ಟಪಡಿಸಿದ್ದಾರೆ ಎಂದು ಕಾನೂನು ಸಚಿವ ಜೆ ಸಿ ಮಾಧುಸ್ವಾಮಿ ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ವಾರ ಸದನವನ್ನು ಮೊಟಕುಗೊಳಿಸುವುದಿಲ್ಲ. ಮಾರ್ಚ್ 30 ರವರೆಗೆ ಅಧಿವೇಶನ ನಡೆಯುತ್ತದೆ. ಯಾವುದೇ ಕಾರಣಕ್ಕೂ ಸದನ ಮೊಟಕು ಮಾಡುವುದಿಲ್ಲ ಎಂದರು.
ಇನ್ನು ‘ಕಾಶ್ಮೀರ ಫೈಲ್ಸ್’ ಚಿತ್ರ ವಿಚಾರದ ಬಗ್ಗೆ ಮಾತನಾಡಿದ ಸಚಿವರು, ನಾನು ಚಿತ್ರ ನೋಡಿದ್ದೇನೆ. ನೋಡುವುದು ನಮ್ಮ ಇಷ್ಟ, ನೋಡದೆ ಇರುವುದು ಕಾಂಗ್ರೆಸ್ ನ ಇಷ್ಟ. ಯಾರನ್ನು ಚಿತ್ರ ನೋಡಿ ಎಂದು ಬಲವಂತ ಮಾಡಲಾಗಲ್ಲ. ಇತಿಹಾಸದಲ್ಲಿ ಏನು ನಡೆದಿದೆ ಎಂಬುದನ್ನು ಜನರಿಗೆ ಹೇಳಬೇಕು. ಈ ಕೆಲಸವನ್ನು ಈ ಚಿತ್ರ ಮಾಡಿದೆ. ಅದರಲ್ಲಿ ತಪ್ಪೇನಿದೆ? ಎಂದು ಪ್ರಶ್ನಿಸಿದ್ದಾರೆ.
ಹಿಜಾಬ್ ಗೆ ಪಟ್ಟು ಹಿಡಿದು ಪರೀಕ್ಷೆಗೆ ಗೈರು ಹಾಜರಾದರೆ ಅವರಿಗೆ ಮರು ಪರೀಕ್ಷೆಯಿಲ್ಲ. ಈ ವಿಚಾರದಲ್ಲಿ ಸರಕಾರದ ನಿಲುವಿನಲ್ಲಿ ಯಾವುದೇ ಬದಲಾವಣೆಯಿಲ್ಲ. ಹೈಕೋರ್ಟ್ ಆದೇಶ ಚಾಚೂ ತಪ್ಪದೆ ಪಾಲಿಸುವುದು ಸರಕಾರದ ಕರ್ತವ್ಯ. ಈ ಕರ್ತವ್ಯದಲ್ಲಿ ವಿಫಲರಾಗಿ ನ್ಯಾಯಾಲಯದಿಂದ ಛೀಮಾರಿ ಹಾಕಿಸಿಕೊಳ್ಳಲು ನಾವು ಸಿದ್ದರಿಲ್ಲ ಎಂದು ಸಚಿವ ಮಾಧುಸ್ವಾಮಿ ಹೇಳಿದರು.




