ಮದ್ದೂರು: ಟಿಪ್ಪರ್ ಲಾರಿಗೆ ಬೆಂಕಿ, ಚಾಲಕ ಸಜೀವ ದಹನ
ಮಂಡ್ಯ: ಮದ್ದೂರು ಪಟ್ಟಣದ ಬೆಂಗಳೂರು – ಮೈಸೂರು ಹೆದ್ದಾರಿಯಲ್ಲಿ ಭೀಕರ ಅಪಘಾತ ಸಂಭವಿಸಿದ ಪರಿಣಾಮ ಚಾಲಕನ ಸಮೇತ ಟಿಪ್ಪರ್ ಲಾರಿ ಸುಟ್ಟು ಕರಕಲಾಗಿರುವ ಘಟನೆ ಬೆಳಗ್ಗೆ ನಡೆದಿದೆ.
ಮದ್ದೂರು ಪಟ್ಟಣದ ಬೆಂಗಳೂರು – ಮೈಸೂರು ಎಲ್.ಐ.ಸಿ ಕಛೇರಿ ಮುಂಭಾಗ ಘಟನೆ ನಡೆದಿದ್ದು, ಬಿಡದಿಯಿಂದ ಮೈಸೂರಿಗೆ ಜೆಲ್ಲಿ ತುಂಬಿಕೊಂಡು ತೆರಳುತ್ತಿದ್ದ ಲಾರಿ, ಎಲ್.ಐ.ಸಿ ಕಛೇರಿ ಬಳಿ ಬರುತ್ತಿದ್ದಂತೆ ಪಂಚರ್ ಆಗಿ ಪಿಲ್ಲರ್ ಗೆ ಡಿಕ್ಕಿ ಹೊಡೆದು ದುರ್ಘಟನೆ ಸಂಭವಿಸಿದೆ.
ಅಪಘಾತ ರಭಸಕ್ಕೆ ಟಿಪ್ಪರ್ ನಜ್ಜುಗುಜ್ಜಾಗಿದ್ದು ಚಾಲಕ ವಾಹನದೊಳಗೆ ಸಿಲುಕಿ ಹೊರಬರಲಾಗದೇ ಟಿಪ್ಪರ್ನಲ್ಲೇ ಸಜೀವ ದಹನವಾಗಿದ್ದಾನೆ. ಮೃತ ಚಾಲಕನನ್ನು ಹಾಸನ ಮೂಲದ ದಿನೇಶ್ ಎಂದು ಗುರುತಿಸಲಾಗಿದೆ.
ಸ್ಥಳಕ್ಕೆ ಅಗ್ನಿ ಶಾಮಕ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿ ಚಾಲಕನ ಶವ ಹೊರತೆಗೆಯಲಾಗಿದೆ. ಚಾಲಕನ ಶವ ಮದ್ದೂರು ತಾಲೂಕು ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ಈ ಘಟನೆಯಿಂದ ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್ ಉಂಟಾಯಿತು. ಬಳಿಕ ಟಿಪ್ಪರ್ ಪಕ್ಕಕ್ಕೆ ಸರಿಸಿ ಪೊಲೀಸರು ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಈ ಸಂಬಂಧ ಮದ್ದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ




