ಮಂಗಳೂರು: ದಯಾನಂದ ಪೈ-ಸತೀಶ್ ಪೈ ಸರಕಾರಿ ಕಾಲೇಜಿನಲ್ಲಿ ಹಿಜಾಬ್ ವಿವಾದ: ಠಾಣಾಧಿಕಾರಿಯಿಂದ ಮುಸ್ಲಿಂ ವಿದ್ಯಾರ್ಥಿಗಳಿಗೆ ಜೀವಬೆದರಿಕೆ
ಮಂಗಳೂರು: ನಗರದ ದಯಾನಂದ ಪೈ-ಸತೀಶ್ ಪೈ ಸರಕಾರಿ ಕಾಲೇಜಿನಲ್ಲಿ ನಡೆದ ಹಿಜಾಬ್ ವಿವಾದದಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರಿಗೆ ನಗರದ ಬಂದರು ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ರಾಘವೇಂದ್ರ ನಿಮ್ಮ ಲೈಫ್ ಸ್ಪಾಯಿಲ್ ಮಾಡುತ್ತೇನೆ ಎಂದು ಜೀವಬೆದರಿಕೆ ಹಾಕಿದ್ದಾರೆಂದು ಸಂತ್ರಸ್ತೆ ವಿದ್ಯಾರ್ಥಿನಿ ಹಿಬಾ ಶೇಖ್ ಆರೋಪಿಸಿದ್ದಾರೆ.
ಈ ಬಗ್ಗೆ ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಹಿಜಾಬ್ ವಿವಾದದ ವೇಳೆ ಕಾಲೇಜಿಗೆ ಬಂದ ನಗರದ ಬಂದರು ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್, ಮುಸ್ಲಿಂ ವಿದ್ಯಾರ್ಥಿಗಳನ್ನುದ್ದೇಶಿಸಿ, ‘ನಿಮ್ಮ ಲೈಫ್ ಸ್ಪಾಯಿಲ್ ಮಾಡುತ್ತೇನೆ. ಇನ್ನೂ ಇಲ್ಲೇ ಇದ್ದರೇ ಜೀವನಪೂರ್ತಿ ಕಣ್ಣೀರಲ್ಲೇ ಕಾಲ ಕಳೆಯುವಂತೆ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದಾರೆ ಎಂದು ಹಿಬಾ ಶೇಖ್ ಆರೋಪಿಸಿದ್ದಾರೆ.
ಮಾ.3ರಂದು ಪರೀಕ್ಷೆ ಆರಂಭವಾಗಿತ್ತು.
ಈ ಹಿನ್ನೆಲೆಯಲ್ಲಿ ಪರೀಕ್ಷಾ ಹಾಲ್‌ಗೆ ಹಿಜಾಬ್ ಹಾಕಲು ಅನುಮತಿ ಕೇಳಿದಾಗ ಪ್ರಾಂಶುಪಾಲರು ತಲೆಗೆ ಹಿಜಾಬ್ ಬೇಡ ಕೇವಲ ಶಾಲು ಹಾಕಿ ಎಂದಿದ್ದರು.
ಇದನ್ನು ಮೌಖಿಕವಾಗಿ ತಿಳಿಸಿದ್ದರು. ಅದರಂತೆ ಪರೀಕ್ಷೆ ಹಾಲ್‌ನಲ್ಲಿ ಕುಳಿತುಕೊಂಡಾಗ ಸಾಯಿ ಸಂದೇಶ್ ಬಂದು ‘ನಿಮಗೆ ಯಾರು ಎಕ್ಸಾಂ ಹಾಲಲ್ಲಿ ಕುಳಿತುಕೊಳ್ಳಿಕ್ಕೆ ಹೊರಗೆ ಹೋಗಿ’ ಎಂದು ಆರ್ಡರ್ ಮಾಡಿದ್ದಾನೆ.
ನಮಗೆ ಪ್ರಿನ್ಸಿಪಾಲ್ ಅನುಮತಿ ಕೊಟ್ಟಿದ್ದಾರೆಂದು ನಾವು ಉತ್ತರಿಸಿ ಅಲ್ಲೇ ಕುಳಿತಿದ್ದೆನು. ಈ ಬಗ್ಗೆ ಆತ ಪ್ರಾಧ್ಯಾಪಕರುಗಳಿಗೆ ದೂರು ನೀಡಿದ್ದಾನೆ.
ಈ ವೇಳೆ ಲೆಕ್ಚರ್ಸ್ ಬಂದು ‘ನೀವು ಪ್ರಾಂಶುಪಾಲರ ಬಳಿ ಹೋಗಿ’ ಎಂದಾಗ ನಾವು ಅವರಿಗೆ ಗೌರವ ಕೊಟ್ಟು ಹೊರಗೆ ಹೋಗಿದ್ದೆವು. ಪ್ರಾಂಶುಪಾಲರ ಕೊಠಡಿ ಬಳಿ ಹೋದಾಗ ನನ್ನಂತೆ ಉಳಿದ ತರಗತಿಯ ಮುಸ್ಲಿಂ ವಿದ್ಯಾರ್ಥನಿಯರಿದ್ದರು.
ಈ ವೇಳೆ ಇದೇ ಸಾಯಿ ಸಂದೇಶ್ ಮತ್ತು ತಂಡ ಪ್ರಾಂಶುಪಾಲರ ಬಳಿ ಹಿಜಾಬ್ ಧರಿಸಿದವರಿಗೆ ಪರೀಕ್ಷೆ ಬರೆಯಲು ಅವಕಾಶ ನೀಡಿದರೆ ನಾವು ಪರೀಕ್ಷೆ ಬರೆಯುವುದಿಲ್ಲ ಎಂದು ಪ್ರಿನ್ಸಿಪಾಲ್ ಬಳಿ ವಾದ ಮಾಡಿ, ಒತ್ತಡ ಹಾಕಿದ್ದಾರೆ.
ಈ ವೇಳೆ ಪ್ರಿನ್ಸಿಪಾಲ್ ‘ನಾನು ಅವರಿಗೆ ಪರೀಕ್ಷೆಗೆ ಅವಕಾಶ ನೀಡಲ್ಲ ಎಂದಿದ್ದಾರೆ. ಈ ಘಟನೆ ನಡೆದು ಅಂದು ಮನೆಗೆ ಹೋಗಿದ್ದೆವು. ಸಾಯಿ ಸಂದೇಶ್ ಪ್ರಥಮ ತರಗತಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾಗ ಅಲ್ಲಿಗೂ ತೆರಳಿ ಪರೀಕ್ಷೆ ಪೇಪರ್ ಹಾಗೂ ಅನುಮತಿ ಪತ್ರವನ್ನು ಎಳೆದುಕೊಂಡು ಹೋಗಿದ್ದಾನೆ ಎಮದು ಆರೋಪಿಸಿದ್ದಾರೆ.
ಮರುದಿನ ಕಾಲೇಜಿನ ಒಳಗೆ ಪ್ರವೇಶಿಸಲು ಬಿಟ್ಟಿಲ್ಲ. ಈ ವೇಳೆಯೂ ಪೊಲೀಸರು ಧಮ್ಕಿ ಹಾಕಿದ್ದರು. ಈ ವೇಳೆ ಮಾತಿನ ಚಕಮಕಿ ನಡೆದಾಗ ‘ನಿನ್ನಪ್ಪನಾ ಕಾಲೇಜಾ ಎಂದು ಪ್ರಶ್ನಿಸಿದ್ದೇನೆ’. ಇದಾದ ನಂತರ ನನಗೆ ಬೆದರಿಕೆ ಕರೆ ಬರುತ್ತಿದೆ.
ನೀವು ಉಗ್ರಗಾಮಿಗಳು ಎಂದು ಅವಮಾನ
ಮರುದಿನ ಕ್ಯಾಂಟಿನಲ್ಲಿಯೂ ಇದ್ದಾಗ ಕಾಲೇಜಿನ ಸಿಬ್ಬಂದಿ ಬಂದು ‘ಇಲ್ಲಿ ನೀರು ಕುಡಿಯಬಾರದು, ಊಟ ಮಾಡಬಾರದು, ಮುಸ್ಲಿಂರನ್ನು ಬಿಟ್ಟು ಉಳಿದವರೊಂದಿಗೆ ನೀವು ಮಾತನಾಡುವಂತಿಲ್ಲ. ನೀವು ಉಗ್ರಗಾಮಿಗಳು ಎಂದು ಅವಮಾನ ಮಾಡಿದ್ದರು. ಈ ಬಗ್ಗೆ ಪ್ರಾಂಶುಪಾಲರಿಗೆ ದೂರು ನೀಡಿದಾಗ ಅವರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.
‘ನಮ್ಮ ದೂರಿನಡಿ ಸೆಕ್ಷನ್ ದಾಖಲಿಸಿಲ್ಲ’
ಘಟನೆ ಬಗ್ಗೆ ದೈಹಿಕ ಕಿರುಕುಳ, ಮಾನಸಿಕ ಕಿರುಕುಳ ನೀಡುತ್ತಿದ್ದಾರೆಂದು ಪೊಲೀಸ್ ಠಾಣೆಗೆ ದೂರು ನೀಡಿದ್ದೇನೆ. ಸಾಯಿ ಸಂದೇಶ್ ಹಾಗೂ ಪ್ರತಿದೂರು ದಾಖಲಿಸಿದ್ದಾರೆ. ಅವರ ದೂರು ದಾಖಲಾಗಿದೆ. ಕಮೀಷನರ್ ಖುದ್ದು ಬಂದು ನನ್ನ ದೂರು ಆಲಿಸಿದ್ದಾರೆ.
ಆದರೆ ಯಾಕೆ ದೈಹಿಕ ಕಿರುಕುಳದಡಿ ಸೆಕ್ಷನ್ ಯಾಕೆ ಜಾರಿಗೊಳಿಸಿಲ್ಲ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಪ್ರಶ್ನೆ ಮಾಡಿದ್ದಾರೆ. ಈ ವೇಳೆ ನನಗೂ ಸಹ ಸಾಯಿ ಸಂದೇಶ್ ಸ್ನೇಹಿತರಿಂದ ಕೊಲೆ ಬೆದರಿಕೆ ಬರುತ್ತಿದೆ ಎಂದು ಆರೋಪಿಸಿದ್ದಾರೆ.




