ಉಡುಪಿ: ರೊಮೇನಿಯಾ ಮೂಲಕ ಭಾರತದತ್ತ ಉಡುಪಿಯ ಇಬ್ಬರು ವಿದ್ಯಾರ್ಥಿಗಳ ಪ್ರಯಾಣ
ಉಡುಪಿ: ಯುದ್ಧಪೀಡಿತ ಉಕ್ರೇನ್‌ನಲ್ಲಿ ಸಿಲುಕಿರುವ ಉಡುಪಿ ಜಿಲ್ಲೆಯ ಒಟ್ಟು ಏಳು ಮಂದಿ ವೈದ್ಯಕೀಯ ವಿದ್ಯಾರ್ಥಿಗಳ ಪೈಕಿ ಇಬ್ಬರು ಇದೀಗ ಭಾರತದತ್ತ ಪ್ರಯಾಣ ಬೆಳೆಸಿದ್ದಾರೆ ಎಂಬ ಮಾಹಿತಿ ಲಭಿಸಿದೆ. ಈ ಇಬ್ಬರು ವಿದ್ಯಾರ್ಥಿಗಳು ರೊಮೇನಿಯಾದಿಂದ ವಿಮಾನ ಮೂಲಕ ನವದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ ಎನ್ನಲಾಗಿದೆ.
ಜಿಲ್ಲಾಡಳಿತ ನೀಡಿದ ಮಾಹಿತಿ ಪ್ರಕಾರ ಉದ್ಯಾವರ ಸಾಲ್ಮರದ ರಾಜೇಶ್ ಎಂಬುವರ ಪುತ್ರ ಮೃಣಾಲ್ ಈಗಾಗಲೇ ರೊಮೇನಿಯಾ ತಲುಪಿದ್ದು, ಅಲ್ಲಿಂದ ನವದೆಹಲಿಗೆ ವಿಮಾನದಲ್ಲಿ ಪ್ರಯಾಣ ಬೆಳೆಸಿದ್ದಾರೆ. ಅವರು ಸಂಜೆ ವೇಳೆ ನವದೆಹಲಿ ತಲುಪುವ ನಿರೀಕ್ಷೆ ಇದೆ.
ನವದೆಹಲಿ ಕರ್ನಾಟಕ ಭವನದ ವ್ಯವಸ್ಥಾಪಕರಾಗಿರುವ ಪರ್ಕಳ ನಿವಾಸಿ ಬಿ.ವಿ ರಾಘವೇಂದ್ರ ಅವರ ಪುತ್ರ ನಿಯಮ್ ರಾಘವೇಂದ್ರ ಸಹ ರೊಮೇನಿಯಾ ಗಡಿ ಮೂಲಕ ಉಕ್ರೇನ್ ತೊರೆದಿದ್ದು, ಅಲ್ಲಿಂದ ಶೀಘ್ರವೇ ಭಾರತದತ್ತ ಪ್ರಯಾಣ ಬೆಳೆಸುವ ನಿರೀಕ್ಷೆ ಇದೆ. ಇನ್ನುಳಿದ ಐವರು ವಿದ್ಯಾರ್ಥಿಗಳು ಉಕ್ರೇನ್ ನಲ್ಲಿ ಸುರಕ್ಷಿತವಾಗಿದ್ದು ಅವರನ್ನು ಕರೆತರುವ ಪ್ರಯತ್ನ ನಡೆಯುತ್ತಿದೆ.





