ಕೊಳ್ನಾಡು ಗ್ರಾಮದ ಕುಖ್ಯಾತ ಅಡಿಕೆ ಕಳ್ಳನನ್ನು ಬಂಧಿಸುವಲ್ಲಿ ವಿಟ್ಲ ಪೊಲೀಸರು ಯಶಸ್ವಿ: ಬರ್ಕಳ ನಿವಾಸಿ ಜಯರಾಮ ಗೌಡ ಬಂಧನ.!

ವಿಟ್ಲ: ಕಳೆದ ಕೆಲವು ದಿನಗಳಿಂದ ಕೊಳ್ನಾಡು ಗ್ರಾಮದ ಕಲ್ಲಮಜಲು, ಸೆರ್ಕಳ, ಪೀಲ್ಯಡ್ಕ, ಖಂಡಿಗ, ಬರ್ಕಳ, ಅಲ್ಲಿಕಂಡೆ ಮತ್ತು ಕಾಡುಮಠ ಸುತ್ತಮುತ್ತ ಅಡಿಕೆ ಕಳ್ಳತನ ನಡೆಸುತ್ತಾ 30ಕ್ಕೂ ಹೆಚ್ಚು ಕೃಷಿಕರಿಗೆ ತಲೆನೋವಾಗಿದ್ದ ಕುಖ್ಯಾತ ಅಡಿಕೆ ಕಳ್ಳನನ್ನು ವಿಟ್ಲ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕೊಳ್ನಾಡು ಗ್ರಾಮದ ಬರ್ಕಳ ನಿವಾಸಿ ದಿ.ಬಾಬು ಗೌಡರ ಪುತ್ರ ಜಯರಾಮ(36) ಬಂಧಿತ ಆರೋಪಿ. ಈತನ ಕೃತ್ಯದಿಂದ ನೊಂದ ಕೃಷಿಕರು ಪ್ರತಿನಿತ್ಯ ರಾತ್ರಿ 7ಗಂಟೆಯಿಂದ 12ಗಂಟೆವರೆಗೂ ತಂಡ ತಂಡವಾಗಿ ಊರೆಲ್ಲಾ ಕಾವಲು ಕಾಯುತ್ತಿದ್ದರು.
ಆದರೂ ಕಳ್ಳ ಜಯರಾಮನ ದುಷ್ಕೃತ್ಯ ಮುಲಾಜಿಲ್ಲದೇ ಮುಂದುವರೆದಿತ್ತು. ಕಳ್ಳ ಜಯರಾಮನ ದುಷ್ಕೃತ್ಯದಿಂದ ಹೈರಾಣರಾದ ಕೃಷಿಕರು ವಿಟ್ಲ ಠಾಣೆಗೆ ದೂರು ನೀಡಿ ಕಳ್ಳ ಜಯರಾಮನನ್ನು ಬಂಧಿಸುವಂತೆ ಒತ್ತಾಯಿಸಿದ್ದರು.
ದೂರು ದಾಖಲಿಸಿಕೊಂಡ ಪೊಲೀಸರು ಆರೋಪಿ ಜಯರಾಮನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಜಯರಾಮನ ಬಂಧನದಿಂದ ನಿಟ್ಟುಸಿರು ಬಿಟ್ಟ ಕೃಷಿಕರು ವಿಟ್ಲ ಪೊಲೀಸರ ಕಾರ್ಯವನ್ನು ಅಭಿನಂದಿಸಿದ್ದಾರೆ.