ಬಿಜೆಪಿ ಮುಖಂಡನಿಂದ ಹಿಂದೂ ಯುವಕನ ಬರ್ಬರ ಹತ್ಯೆ: ಮೌನಕ್ಕೆ ಶರಣಾದ ಹಿಂದೂ ಪರ ಸಂಘಟನೆಗಳು
ಬೆಳ್ತಂಗಡಿ: ಪರಿಶಿಷ್ಟ ಜಾತಿಯ ವ್ಯಕ್ತಿಯೊಬ್ಬರನ್ನು ಬಿಜೆಪಿ ಮುಖಂಡ ಎನ್ನಲಾಗಿರುವ ವ್ಯಕ್ತಿಯೋರ್ವ ಥಳಿಸಿಕೊಂದಿರುವ ಆರೋಪ ಕೇಳಿ ಬಂದಿದ್ದು, ದಲಿತ ಯುವಕನಿಗೆ ಮಾರಣಾಂತಿಕವಾಗಿ ಹಲ್ಲೆ ನಡೆಸಿ, ಕಾಲು ಜಾರಿ ಬಿದ್ದು ಗಾಯವಾಗಿದೆ ಎಂಬ ಕಾರಣ ನೀಡಿ ಆಸ್ಪತ್ರೆಗೆ ದಾಖಲಿಸಿದ್ದಾನೆ ಎನ್ನುವ ಆರೋಪ ಕೇಳಿ ಬಂದಿದೆ.
ಕನ್ಯಾಡಿಯ 40 ವರ್ಷ ವಯಸ್ಸಿನ ದಿನೇಶ್ ಎಂಬವರು ಹತ್ಯೆಗೀಡಾದವರಾಗಿದ್ದು, ಬಿಜೆಪಿ ಪಕ್ಷದ ಜೊತೆಗೆ ಗುರುತಿಸಿಕೊಂಡಿರುವ ಧರ್ಮಸ್ಥಳ ನಿವಾಸಿ ಕಿಟ್ಟ ಅಲಿಯಾಸ್ ಕೃಷ್ಣ ಡಿ. ಹತ್ಯೆ ಆರೋಪಿಯಾಗಿದ್ದಾನೆ. ದಿನೇಶ್ ಮೃತಪಟ್ಟ ಬೆನ್ನಲ್ಲೇ ಆರೋಪಿ ಕೃಷ್ಣ ತಲೆಮರೆಸಿಕೊಂಡಿದ್ದಾನೆ.
ಕನ್ಯಾಡಿ ದಿನೇಶ್ ಅವರ ಅಂಗಡಿಗೆ ಬಳಿ ಬಂದ ಆರೋಪಿ ಕೃಷ್ಣ, ದಿನೇಶ್ ಗೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದು, ಈ ಹಲ್ಲೆಯ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಫೆ.23ರಂದು ಈ ಹಲ್ಲೆ ನಡೆದಿದೆ ಎನ್ನಲಾಗಿದೆ. ಫೆ.24ರಂದು ದಿನೇಶ್ ಅವರನ್ನು ಆರೋಪಿ ಕೃಷ್ಣ ಆಸ್ಪತ್ರೆಗೆ ದಾಖಲಿಸಿದ್ದು, ಆತ ಕಾಲು ಜಾರಿ ಬಿದ್ದು ಗಾಯಗೊಂಡಿರುವುದಾಗಿ ಆಸ್ಪತ್ರೆಯಲ್ಲಿ ಹೇಳಿದ್ದ. ಇದಾದ ಬಳಿಕ ದಿನೇಶ್ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದು, ಆರೋಪಿ ಕೃಷ್ಣ ಬಳಿಕ ತಲೆ ಮರೆಸಿಕೊಂಡಿದ್ದಾನೆ.
ಘಟನೆ ಸಂಬಂಧ ದಿನೇಶ್ ಪತ್ನಿ ಪೊಲೀಸರಿಗೆ ದೂರು ನೀಡಿದ್ದು, ಕೃಷ್ಣನೇ ದಿನೇಶ್ ಮೇಲೆ ಹಲ್ಲೆ ಮಾಡಿರುವುದಾಗಿ ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಘಟನೆ ಸಂಬಂಧ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೌನಕ್ಕೆ ಶರಣಾದ ಹಿಂದೂ ಸಂಘಟನೆಗಳು
ಹಿಂದೂ ಯುವಕನನ್ನು ಆರೋಪಿ ಕೃಷ್ಣ ಮಾರಣಾಂತಿಕವಾಗಿ ಥಳಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆರೋಪಿಯು ಈ ಹಿಂದೆ ಬಿಜೆಪಿ ಬೆಂಬಲಿತನಾಗಿ ಸ್ಪರ್ಧಿಸಿದವನಾಗಿದ್ದು, ಬಜರಂಗದಳದಲ್ಲಿ ಗುರುತಿಸಿಕೊಂಡಿದ್ದಾನೆ ಎನ್ನುವ ಆರೋಪಗಳು ಕೇಳಿ ಬಂದಿವೆ. ಶಿವಮೊಗ್ಗದ ಹರ್ಷ ಹತ್ಯೆಯ ಬಗ್ಗೆ ಭಾರೀ ಪ್ರತಿಭಟನೆ ನಡೆಸಲಾಯಿತು. ಆದರೆ, ಒಬ್ಬ ದಲಿತನ ಹತ್ಯೆಯಾದರೂ ಯಾಕೆ ಹಿಂದೂ ಪರ ಸಂಘಟನೆಗಳು ಆತನ ಪರವಾಗಿ ನಿಲ್ಲುತ್ತಿಲ್ಲ? ಯಾಕೆ ದಲಿತರ ಮೇಲೆ ದಾಳಿಯಾದಾಗ ಹಿಂದೂ ಸಂಘಟನೆಗಳು ಮೌನಕ್ಕೆ ಶರಣಾಗುತ್ತಿವೆ? ಎನ್ನುವ ಪ್ರಶ್ನೆಗಳು ಕೇಳಿ ಬಂದಿವೆ. ಅತ್ಯಧಿಕ ಸಂಖ್ಯೆಯಲ್ಲಿ ದಲಿತ ಯುವಕರು ಬಿಜೆಪಿ ಹಾಗೂ ಹಿಂದೂ ಸಂಘಟನೆಗಳಲ್ಲಿ ಗುರುತಿಸಿಕೊಂಡಿದ್ದಾರೆ. ಆದರೆ, ದಲಿತರಿಗೆ ಅನ್ಯಾಯವಾದಾಗ ಯಾಕೆ ಹಿಂದೂ ಪರ ಸಂಘಟನೆಗಳು ಧ್ವನಿಯೆತ್ತುವುದಿಲ್ಲ? ಎನ್ನುವ ಪ್ರಶ್ನೆಗಳು ಕೇಳಿ ಬಂದಿವೆ.