ಧರ್ಮಸ್ಥಳ ಭಜರಂಗದಳ ಮುಖಂಡನಿಂದ ಹಿಂದೂ ಯುವಕನ ಹತ್ಯೆ ಪ್ರಕರಣ: ಪೊಲೀಸ್ ಠಾಣೆ ಚಲೋ ಕಾರ್ಯಕ್ರಮದ ಎಚ್ಚರಿಕೆ ನೀಡಿದ ದಲಿತ ಹಕ್ಕುಗಳ ಸಮಿತಿ.
ಬೆಳ್ತಂಗಡಿ: ಕ್ಷುಲ್ಲಕ ಕಾರಣಕ್ಕಾಗಿ ಧರ್ಮಸ್ಥಳ ಗ್ರಾಮದ ಕನ್ಯಾಡಿಯಲ್ಲಿ ದಲಿತ ವ್ಯಕ್ತಿಯನ್ನು ಹೊಡೆದು ಕೊಲೆ ಮಾಡಿದ ಭಜರಂಗದಳದ ಕಾರ್ಯಕರ್ತನನ್ನು ತಕ್ಷಣ ಬಂಧಿಸಬೇಕು ಎಂದು ದಲಿತ ಹಕ್ಕುಗಳ ಸಮಿತಿ ಒತ್ತಾಯಿಸಿದೆ.
ಧರ್ಮಸ್ಥಳ ಗ್ರಾಮದ ಕನ್ಯಾಡಿಯಲ್ಲಿ ಪುಂಡಾಟಿಕೆ ನಡೆಸುವ ಮೂಲಕ ಕುಖ್ಯಾತಿಯಾಗಿದ್ದ ಭಜರಂಗದಳದ ಕಾರ್ಯಕರ್ತ , ಬಿಜೆಪಿ ಮುಖಂಡ ಕೃಷ್ಣ ಡಿ ಯಾನೆ ಕಿಟ್ಟ ಎಂಬಾತ ದಲಿತ ಸಮುದಾಯದ ದಿನೇಶ್ ಎಂಬಾತನನ್ನು ಕ್ಷುಲ್ಲಕ ಕಾರಣಕ್ಕಾಗಿ ಗಂಭೀರವಾಗಿ ಹಲ್ಲೆ ನಡೆಸಿ ಕೊಲೆಗೆ ಕಾರಣನಾಗಿದ್ದಾನೆ.
ಪ್ರಕರಣದಿಂದ ತಪ್ಪಿಸಿಕೊಳ್ಳಲು ಆರೋಪಿ ಕೃಷ್ಣ ಮೆಟ್ಟಲು ನಿಂದ ಬಿದ್ದು ಗಾಯಗೊಂಡಿದ್ದು ಎಂದು ವೈದ್ಯರಿಗೆ ಸುಳ್ಳು ಹೇಳಿ ಒಳರೋಗಿಯಾಗಿ ದಾಖಲಿಸಿರುವುದು ಭಜರಂಗದಳದ ಕ್ರಿಮಿನಲ್ ಚಟುವಟಿಕೆಗಳ ಭಾಗವಾಗಿದೆ ಎಂದು ದಲಿತ ಹಕ್ಕುಗಳ ಸಮಿತಿ ರಾಜ್ಯ ಸಮಿತಿ ಸದಸ್ಯ ಶೇಖರ್ ಲಾಯಿಲ ಆರೋಪಿಸಿದ್ದಾರೆ. ಆರೋಪಿ ಕೃಷ್ಣನ ಸಹೋದರ ಭಜರಂಗದಳದ ಜಿಲ್ಲಾ ಸಹ ಸಂಚಾಲಕ ಭಾಸ್ಕರ ಧರ್ಮಸ್ಥಳನಾಗಿದ್ದು , ಆರೋಪಿ ಪರಾರಿಯಾಗಲು ಸಹಕರಿಸಿದ್ದು , ಆತನ ಮೇಲೆಯು ಪ್ರಕರಣ ದಾಖಲಿಸಿ , ಇಬ್ಬರನ್ನೂ ಬಂಧಿಸಿ ಜೈಲಿಗಟ್ಟಬೇಕು , ತಪ್ಪಿದಲ್ಲಿ ಧರ್ಮಸ್ಥಳ ಪೋಲಿಸ್ ಠಾಣೆ ಚಲೋ ಕಾರ್ಯಕ್ರಮ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.