ಮಾ.26ರಿಂದ ಮೇ 29ರವರೆಗೆ ಐಪಿಎಲ್ ಟಿ-20 ಕ್ರಿಕೆಟ್ ಪಂದ್ಯಾಟ
ಹೊಸದಿಲ್ಲಿ: 15ನೇ ಆವೃತ್ತಿ ಐಪಿಎಲ್ ಯಾವಾಗ ಆರಂಭವಾಗುವುದೆಂಬ ಕುತೂಹಲಕ್ಕೆ ಕಡೆಗೂ ತೆರೆಬಿದ್ದಿದೆ.
ಈ ಕೂಟ ಮಾ.26ರಂದು ಮುಂಬಯಿಯಲ್ಲಿ ಆರಂಭವಾಗಿ ಮೇ 29ಕ್ಕೆ ಮುಕ್ತಾಯವಾಗಲಿದೆ. ಕೂಟದ ಆರಂಭದಲ್ಲಿ ಮೈದಾನ ಸಾಮರ್ಥ್ಯದ ಶೇ.40 ಪ್ರೇಕ್ಷಕರಿಗೆ ಅವಕಾಶ ಮಾಡಿಕೊಡಲಾಗುತ್ತದೆ. ಸದ್ಯದ ಮಟ್ಟಿಗೆ ಇದೊಂದು ಆಶಾದಾಯಕ ಬೆಳವಣಿಗೆ.
ಗುರುವಾರ ನಡೆದ ಐಪಿಎಲ್ ಆಡಳಿತ ಮಂಡಳಿ ಸಭೆಯ ಬಳಿಕ ಮುಖ್ಯಸ್ಥ ಬ್ರಿಜೇಶ್ ಪಟೇಲ್ ಈ ಘೋಷಣೆ ಮಾಡಿದ್ದಾರೆ. ಈ ಬಾರಿ ಲಕ್ನೋ ಸೂಪರ್ ಜೈಂಟ್ಸ್ ಹಾಗೂ ಗುಜರಾತ್ ಟೈಟಾನ್ಸ್ ತಂಡಗಳ ಸೇರ್ಪಡೆಯೊಂದಿಗೆ ಒಟ್ಟು ತಂಡಗಳ ಸಂಖ್ಯೆ 10ಕ್ಕೇರಿದೆ. ಹಾಗಾಗಿ ಬೃಹತ್ ಕೂಟವೆನಿಸಿಕೊಳ್ಳಲಿದೆ.
ತಂಡಗಳ ಸಂಖ್ಯೆ ಹೆಚ್ಚಿರುವುದರಿಂದ ಪಂದ್ಯಗಳ ಸಂಖ್ಯೆ 60ರಿಂದ 74ಕ್ಕೇರಲಿದೆ. ಹಾಗಾಗಿ ಈ ಪಂದ್ಯಗಳನ್ನು ಮುಂಬಯಿ ಹಾಗೂ ಪುಣೆಯ ನಡುವೆ ಹಂಚಲಾಗುತ್ತದೆ. ಮುಂಬಯಿಯ ವಾಂಖೇಡೆ, ಬ್ರೆಬೋರ್ನ್ ಹಾಗೂ ಡಿವೈ ಪಾಟೀಲ್ ಮೈದಾನಗಳಲ್ಲಿ ಬಹುತೇಕ ಪಂದ್ಯಗಳು ನಡೆಯುತ್ತವೆ. ಬಾಕಿ ಪಂದ್ಯಗಳು ಪುಣೆಯಲ್ಲಿ ನಡೆಯಲಿವೆ.