ಜ್ಯುವೆಲ್ಲರಿ ಮಳಿಗೆಯ ಗೋಡೆ ಕೊರೆದು 50 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು
ಬೆಂಗಳೂರು: ಜ್ಯುವೆಲ್ಲರಿ ಮಳಿಗೆಯ ಗೋಡೆ ಕೊರೆದು ಚಿನ್ನಾಭರಣ ದೋಚಿರುವ ಘಟನೆ ಹೆಣ್ಣೂರು ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಹೆಣ್ಣೂರಿನ ಸರಾಯಿಪಾಳ್ಯ ದಲ್ಲಿರುವ ರಾಘವೇಂದ್ರ ಜ್ಯುವೆಲ್ಲರಿಯ ಗೋಡೆ ಕೊರೆದ ಆರೋಪಿಗಳು, 50 ಲಕ್ಷ ರೂ. ಮೌಲ್ಯದ 1,200 ಗ್ರಾಂ ಚಿನ್ನಾ ಭರಣ ದೋಚಿದ್ದಾರೆ.
ಮಳಿಗೆಗೆ ಹೊಂದಿಕೊಡಂತೆ ಪಕ್ಕದ ಕಟ್ಟಡಕ್ಕೆ ಹೋಗಲು ಮೆಟ್ಟಿಲುಗಳಿದ್ದು, ಈ ಭಾಗದಲ್ಲಿ ಮಳಿಗೆಯ ಗೋಡೆಯನ್ನು ಕೊರೆದು, ಒಳ ನುಗ್ಗಿರುವ ಕಳ್ಳರು ಚಿನ್ನಾಭರಣ ದೋಚಿದ್ದಾರೆ. ಬುಧವಾರ ಬೆಳಗ್ಗೆ ಮಾಲೀಕರು ಮಳಿಗೆ ತೆರೆಯಲು ಬಂದಾಗ ಘಟನೆ ಬೆಳಕಿಗೆ ಬಂದಿದೆ.
ಆರೋಪಿಗಳ ಕೃತ್ಯ ಮಳಿಗೆಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಆರೋಪಿಗಳ ಪತ್ತೆಗಾಗಿ ಹೆಣ್ಣೂರು ಠಾಣೆ ಇನ್‌ಸ್ಪೆಕ್ಟರ್ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿದೆ ಎಂದು ಪೊಲೀಸರು ಹೇಳಿದರು.




