ಕೊಂಜಾಡಿ ಚರಂಡಿಗೆ ಉರುಳಿ ಬಿದ್ದ ಕಾರು: ಮಲ್ಯಾಡಿ ಮೂಲದ ಉದ್ಯಮಿ ಮೃತ್ಯು
ಸಿದ್ದಾಪುರ: ಬೆಂಗಳೂರಿನಿಂದ ಹಾಲಾಡಿ ಮಾರ್ಗವಾಗಿ ಶಾನಾಡಿಗೆ ತೆರಳುತ್ತಿದ್ದ ಮಾರುತಿ ಬಲೆನೋ ಕಾರು ಸೋಮವಾರ ಮಧ್ಯಾಹ್ನ ಬೈಂದೂರು-ವೀರಾಜಪೇಟೆ ರಾಜ್ಯ ಹೆದ್ದಾರಿಯ ಆರ್ಡಿ ಕೊಂಜಾಡಿ ಬಳಿ ಚರಂಡಿಗೆ ಉರುಳಿ ಬಿದ್ದಿದೆ.
ಪರಿಣಾಮ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಕುಂದಾಪುರ ತಾಲೂಕು ಮಲ್ಯಾಡಿ ಬೆಟ್ಟಿನಮನೆ ಮೂಲದ ಬೆಂಗಳೂರು ಉದ್ಯಮಿ ತೇಜರಾಜ್ ಶೆಟ್ಟಿ (65) ಸಾವನ್ನಪ್ಪಿದ್ದಾರೆ.
ಪುತ್ರ ಕಾರು ಚಲಾಯಿಸುತ್ತಿದ್ದ ಕಾರಿನಲ್ಲಿ ತೇಜರಾಜ್ ಶೆಟ್ಟಿ ಹಾಗೂ ಮಗ ರಕ್ಷಕ್ ಶೆಟ್ಟಿ ಪ್ರಯಾಣಿಸುತ್ತಿದ್ದರು. ಮಗ ರಕ್ಷಕ್ ಶೆಟ್ಟಿ (26) ಅವರು ಕಾರು ಚಾಲಾಯಿಸುತ್ತಿದ್ದು, ಆರ್ಡಿ ಕೊಂಜಾಡಿ ಬಳಿ ಕಾರು ಚರಂಡಿಗೆ ಉರುಳಿ ಬಿದ್ದಿದೆ. ಬೆಳ್ವೆ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ತುರ್ತು ಚಿಕಿತ್ಸೆ ಕೊಡಿಸಿದರೂ, ತಲೆ ಭಾಗಕ್ಕೆ ಪೆಟ್ಟು ಬಿದ್ದಿದ್ದ ಪರಿಣಾಮ ತೇಜರಾಜ್ ಶೆಟ್ಟಿ ಮೃತಪಟ್ಟರು. ಮಗ ರಕ್ಷಕ್ ಶೆಟ್ಟಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.




