1 ರಿಂದ 10ನೇ ತರಗತಿಗೆ ದಾಖಲಾಗಿರುವ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ವಿದ್ಯಾರ್ಥಿಗಳ ಡೇಟಾವನ್ನು ಸಂಗ್ರಹಿಸುತ್ತಿರುವ ಸರಕಾರ
ಬೆಂಗಳೂರು: ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ನಿಷೇಧ ಮಾಡಿರುವ ಪ್ರಕರಣದ ವಿರುದ್ದ ಸಲ್ಲಿಸಲಾಗಿರುವ ಅರ್ಜಿ ಇನ್ನೂ ಕೋರ್ಟ್‌ನಲ್ಲಿದೆ.
ಈ ನಡುವೆ ರಾಜ್ಯ ಸರ್ಕಾರವು ಖಾಸಗಿ ಮತ್ತು ಸರ್ಕಾರಿ ಶಿಕ್ಷಣ ಸಂಸ್ಥೆಗಳಿಂದ ವಿಶೇಷವಾಗಿ 1 ರಿಂದ 10 ನೇ ತರಗತಿಗೆ ದಾಖಲಾಗಿರುವ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ವಿದ್ಯಾರ್ಥಿಗಳ ಡೇಟಾವನ್ನು ಸದ್ದಿಲ್ಲದೆ ಸಂಗ್ರಹಿಸಲು ಹೊರಟಿದೆ ಎಂದು ಪತ್ರಿಕೆಯೊಂದು ವರದಿ ಮಾಡಿದೆ.
ಗುರುವಾರ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಪಡೆದ ಅಂಕಿಅಂಶಗಳ ಪ್ರಕಾರ, ರಾಜ್ಯಾದ್ಯಂತ ವಿವಿಧ ಸರ್ಕಾರಿ ಶಾಲೆಗಳಲ್ಲಿ 17,39,742 ಮುಸ್ಲಿಂ ವಿದ್ಯಾರ್ಥಿಗಳಿದ್ದಾರೆ. ಬೆಂಗಳೂರು ದಕ್ಷಿಣದಲ್ಲಿ 1,55,104 ವಿದ್ಯಾರ್ಥಿಗಳಿದ್ದು ಇದು ಅತಿ ಹೆಚ್ಚು ಅಲ್ಪಸಂಖ್ಯಾತ ವಿದ್ಯಾರ್ಥಿಗಳಿರುವ ಪ್ರದೇಶವಾಗಿದೆ. ನಂತರದ ಸ್ಥಾನದಲ್ಲಿ ಕಲಬುರಗಿಯಿದ್ದು, ಇಲ್ಲಿ 1,31,802 ವಿದ್ಯಾರ್ಥಿಗಳಿದ್ದಾರೆ. ಬೆಂಗಳೂರು ಉತ್ತರದಲ್ಲಿ 1,22,993 ವಿದ್ಯಾರ್ಥಿಗಳು ಇದ್ದಾರೆ ಎಂದು ಅಂಕಿಅಂಶಗಳು ಬಹಿರಂಗಪಡಿಸಿದ್ದು, ಚಾಮರಾಜನಗರ ಜಿಲ್ಲೆಯಲ್ಲಿ 9,603 ಮುಸ್ಲಿಂ ವಿದ್ಯಾರ್ಥಿಗಳಿದ್ದಾರೆ. ಇದು ರಾಜ್ಯದಲ್ಲೇ ಅತಿ ಕಡಿಮೆ ಮುಸ್ಲಿಂ ವಿದ್ಯಾರ್ಥಿಗಳಿರುವ ಪ್ರದೇಶವಾಗಿದೆ ಎಂದು ವರದಿಯಾಗಿದೆ.
ಈ ಮಧ್ಯೆ, ತಮ್ಮ ಕಾಲೇಜುಗಳಿಗೆ ದಾಖಲಾದ ಮುಸ್ಲಿಂ ವಿದ್ಯಾರ್ಥಿಗಳ ಸಂಖ್ಯೆಯ ಡೇಟಾವನ್ನು ಸಲ್ಲಿಸಲು ಬೆಂಗಳೂರಿನ ಕೆಲವು ಖಾಸಗಿ ಕಾಲೇಜುಗಳಿಗೆ ಕೇಳಲಾಗಿದೆ ಎಂದು ಪತ್ರಿಕೆಯ ಮೂಲಗಳಲ್ಲಿ ಉಲ್ಲೇಖಿಸಿ ವರದಿ ಮಾಡಿದೆ.
“ನಡೆಯುತ್ತಿರುವ ಹಿಜಾಬ್ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ಕಾಲೇಜುಗಳನ್ನು ಸೂಕ್ಷ್ಮ ವಲಯಗಳಾಗಿ ವರ್ಗೀಕರಿಸಲು ಮತ್ತು ಹೆಚ್ಚುವರಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲು ಮಾಡುತ್ತಿರುವ ಕಸರತ್ತು ಇದು ಇರಬಹುದು ಎಂದು ನಾವು ಭಾವಿಸಿದ್ದೇವೆ” ಎಂದು ಬೆಂಗಳೂರು ದಕ್ಷಿಣದ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರೊಬ್ಬರು ಅಭಿಪ್ರಾಯಪಟ್ಟಿದ್ದಾರೆ ಎಂದು ವರದಿ ಹೇಳಿದೆ.
ವಿದ್ಯಾರ್ಥಿಗಳ ದತ್ತಾಂಶ ಸಂಗ್ರಹದ ಹಿಂದಿನ ಕಾರಣದ ಬಗ್ಗೆ ಅಧಿಕಾರಗಳೊಂದಿಗೆ ಪ್ರಶ್ನಿಸಿದಾಗ, ನಡೆಯುತ್ತಿರುವ ವಿಧಾನಮಂಡಲದ ಅಧಿವೇಶನ ಮತ್ತು ಉಚ್ಚ ನ್ಯಾಯಾಲಯದ ವಿಚಾರಣೆ ಹಿನ್ನಲೆಯಲ್ಲಿ ಸಂಗ್ರಹಿಸಲಾಗುತ್ತಿದೆ ಎಂದು ತಮ್ಮ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ. “ವಿಧಾನ ಮಂಡಲ ಅಧಿವೇಶ ನಡೆಯುತ್ತಿರುವುದರಿಂದ ಚುನಾಯಿತ ಪ್ರತಿನಿಧಿಗಳು ಡೇಟಾವನ್ನು ಕೇಳಬಹುದು ಹಾಗೂ ಹೈಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿರುವುದರಿಂದ ಇದು ಬೇಕಾಗಬಹುದು” ಎಂದು ಶಿಕ್ಷಣ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.




