ಹಿಜಾಬ್ ಕೇಸರಿ ವಿವಾದ : ಇಡೀ ಕ್ಲಾಸ್ಗೆ ಇವಳೊಬ್ಬಳೇ ವಿದ್ಯಾರ್ಥಿನಿ..!
ಬಾಗಲಕೋಟೆ: ಕರಾವಳಿಯಲ್ಲಿ ಆರಂಭಗೊಂಡ ಹಿಜಾಬ್ ಕೇಸರಿ ಶಾಲು ವಿವಾದ ಇದೀಗ ರಾಜ್ಯಾದ್ಯಂತ ಪಸರಿಸಿದ್ದು ಅಲ್ಲಲ್ಲಿ ಗಲಾಟೆ- ದೊಂಬಿಗಳು ನಡೆದುಹೋಗಿವೆ. ಸದ್ಯಕ್ಕೆ ಹಿಜಾಬ್ ಕೇಸರಿ ಶಾಲು ವಿವಾದ ಈಗ ಕೋರ್ಟ್ ನಲ್ಲಿದೆ.
ಈ ವಿವಾದ ರಾಜಕೀಯ ಪಕ್ಷಗಳಿಗೆ ಏಟು ಎದುರೇಟು, ವಾಗ್ದಾಳಿಗಳಿಗೆ ಆಹಾರವಾಗಿದೆ. ಆದರೆ ಈ ಮಧ್ಯೆ ಈ ಹಿಜಾಬ್ ಕೇಸರಿ ವಿವಾದ ವಿದ್ಯಾರ್ಥಿಗಳ ಶಿಕ್ಷಣದ ಮೇಲೆ ಬಾರಿ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ.
ಹಿಜಾಬ್ ಕೇಸರಿ ವಿವಾದ ಶಾಲೆಯಲ್ಲಿ ಹಿಜಾಬ್ ಬಗ್ಗೆ ಇರುವ ನಿಯಮಗಳಿಂದ ಬೇಸತ್ತ ಮುಸ್ಲಿಂ ವಿದ್ಯಾರ್ಥಿನಿಯರು ಶಾಲೆಗೆ ಬರೋದಕ್ಕೆ ಹಿಂದೇಟು ಹಾಕುತ್ತಿದ್ದಾರೆ.
ಇದಕ್ಕೆ ಬಾಗಲಕೊಟೆಯ ಸರಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ ಕಂಡು ಬಂದ ದೃಶ್ಯವೇ ಇದಕ್ಕೆ ಸಾಕ್ಷಿಯಾಗಿದೆ.ಸರಕಾರಿ ಬಾಲಕಿಯರ ಪ್ರೌಢಶಾಲೆಯ ಉರ್ದು ವಿಭಾಗದ ಹತ್ತನೇ ತರಗತಿಗೆ ಹಿಜಾಬ್ ವಿವಾದದಿಂದ ವಿದ್ಯಾರ್ಥಿನಿಯರು ತರಗತಿಗೆ ಬರುತ್ತಿಲ್ಲ.
ಇಡೀ ಕ್ಲಾಸ್ ನಲ್ಲಿ ಒಬ್ಬಳೇ ಒಬ್ಬಳು ವಿದ್ಯಾರ್ಥಿನಿ ತರಗತಿಗೆ ಹಾಜರಾಗಿದ್ದು ಶಿಕ್ಷಕ ಶಿಕ್ಷಕಿಯರು ಇವಳಿಗೆ ಪಾಠ ಮಾಡುತ್ತಿದ್ದಾರೆ. ಒಟ್ಟು 19 ಜನ ವಿದ್ಯಾರ್ಥಿನಿಯರಿದ್ದು ಒಬ್ಬಳನ್ನು ಬಿಟ್ಟು ಎಲ್ಲರೂ ಗೈರಾಗಿದ್ದಾರೆ.
ಮನೆಯಿಂದ ಹಿಜಾಬ್ ಧರಿಸಿಕೊಂಡು ಬರೋದು ಪುನಃ ಶಾಲೆಯಲ್ಲಿ ಅದನ್ನು ತೆಗೆಯೋದು ಈ ಎಲ್ಲ ಮುಜುಗರ ಯಾಕೆ ಅಂತ ವಿದ್ಯಾರ್ಥಿನಿಯರು ಶಾಲೆಗೆ ಹೋಗದೆ ಇರೋದೆ ಒಳ್ಳೆಯದು ಅಂತ ವಿದ್ಯಾರ್ಥಿನಿಯರು, ಪೋಷಕರು ನಿರ್ಧರಿಸಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ.
ಇನ್ನು ಶಾಲೆಗೆ ಬಂದ ಏಕೈಕ ವಿದ್ಯಾರ್ಥಿನಿ ಜಬೀನ್ ಮಕಾಂದಾರ, “ತರಗತಿಗೆ ನಾನು ಒಬ್ಬಳೇ ಬಂದಿದ್ದೇನೆ, ನನ್ನ ಸ್ನೇಹಿತೆಯರು ಯಾರೂ ಬಂದಿಲ್ಲ. ಇದು ಬೇಸರ ತರಿಸಿದೆ. ಯಾವುದೇ ಭಯ ಬೇಡ ಕ್ಲಾಸ್ ಗೆ ಬನ್ನಿ” ಅಂತ ಆಕೆಯ ಸಹಪಾಠಿಗಳಿಗೆ ಮನವಿ ಮಾಡಿದ್ದಾರೆ.
ಒಟ್ಟಾರೆ ರಾಜ್ಯದಲ್ಲಿ ಭುಗಿಲೆದ್ದ ಹಿಜಾಬ್ ಕೇಸರಿ ಶಾಲು ವಿವಾದ ಮುಗಿಯದಾಗಿದ್ದು ಮಕ್ಕಳ ವಿಧ್ಯಾಭ್ಯಾಸಕ್ಕೆ ಕಂಠಕವಾಗುತ್ತಿರೋದಂತೂ ನಿಜ. ಆದಷ್ಟು ಬೇಗ ಈ ವಿವಾದಕ್ಕೆ ಅಂತ್ಯ ಹಾಡಿ ಮರಳಿ ಶಾಲೆ-ಕಾಲೇಜುಗಳಲ್ಲಿ ಸುಂದರ ವಾತಾವರಣ ನಿರ್ಮಾಣ ಮಾಡಬೇಕಿದೆ.




