ಫೆ. 16ರಿಂದ ಪಿಯು, ಡಿಗ್ರಿ ಕಾಲೇಜುಗಳು ಪ್ರಾರಂಭ: ನ್ಯಾಯಾಲಯದ ಆದೇಶ ಪಾಲಿಸಲು ಸೂಚನೆ
ಬೆಂಗಳೂರು: ಕರ್ನಾಟಕದಲ್ಲಿ ಹಿಜಾಬ್ ವಿವಾದದ (Hijab Row) ಹಿನ್ನೆಲೆಯಲ್ಲಿ ಬಂದ್ ಆಗಿದ್ದ ಪಿಯು, ಡಿಗ್ರಿ ಕಾಲೇಜುಗಳನ್ನು ಬುಧವಾರದಿಂದ (ಫೆ.16) ಪ್ರಾರಂಭಿಸಲು ಸರ್ಕಾರ ತೀರ್ಮಾನಿಸಿದೆ.
ಈ ಬಗ್ಗೆ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿಸಿ ನಾಗೇಶ್ (BC Nagesh) ಟ್ವಿಟ್ಟರ್ ಮೂಲಕ ಮಾಹಿತಿ ನೀಡಿದ್ದು, ಫೆ.16ರಿಂದ ಪಿಯು, ಪದವಿ ಕಾಲೇಜುಗಳನ್ನು (College) ಪುನಾರಂಭಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಅವರ ಅಧ್ಯಕ್ಷತೆಯಲ್ಲಿ ಸಚಿವರಾದ ಅರಗ ಜ್ಞಾನೇಂದ್ರ, ಡಾ ಸಿಎನ್ ಅಶ್ವತ್ಥ್ ನಾರಾಯಣ ಹಾಗೂ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಕಾಲೇಜು ಪುನಾರಂಭದ ವೇಳೆ ಅಗತ್ಯ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲು ಮುಖ್ಯಮಂತ್ರಿಯವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.
ರಾಜ್ಯದಲ್ಲಿ ಹಿಜಾಬ್, ಕೇಸರಿ ಶಾಲು ಸಂಘರ್ಷ ವಿಚಾರವಾಗಿ ಸೋಮವಾರ (ಫೆಬ್ರವರಿ 14) ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಸಭೆ ನಡೆಸಲಾಗಿದೆ. ಈ ಸಭೆಯಲ್ಲಿ ಪಿಯು ಹಾಗೂ ಡಿಗ್ರಿ ಕಾಲೇಜು ಆರಂಭಿಸುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದೆ.
ಪೋಷಕರು ಮತ್ತು ಮಕ್ಕಳು ಆತಂಕಪಡುವ ಅಗತ್ಯವಿಲ್ಲ. ಶಾಲಾ ಕಾಲೇಜುಗಳ ಆರಂಭಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಪೋಲಿಸ್ ಇಲಾಖೆ ಅಗತ್ಯ ಮುನ್ನೆಚ್ಚರಿಕೆ ಕ್ರಮವಹಿಸಲಿದೆ. ಶಾಲಾ ಕಾಲೇಜುಗಳ ಜತೆಗೆ ಪೋಲಿಸ್ ಇಲಾಖೆ ಇರಲಿದೆ. ಹೈಕೋರ್ಟ್ ಮಧ್ಯಂತರ ಆದೇಶ ಯಾರು ಉಲ್ಲಂಘನೆ ಮಾಡುವಂತಿಲ್ಲ, ಸಮವಸ್ತ್ರ ಧರಿಸಿ ಶಾಲಾ ಕಾಲೇಜುಗಳಿಗೆ ಹಾಜರಾಗಬೇಕು ಎಂದು ಗೃಹಸಚಿವ ಆರಗ ಜ್ಙಾನೇಂದ್ರ ತಿಳಿಸಿದ್ದಾರೆ.




