ಹಿರಿಯೂರು ಸಮೀಪ ಕಾರು ಮರಕ್ಕೆ ಢಿಕ್ಕಿ: ಮೂವರು ಮಹಿಳೆಯರು ಮೃತ್ಯು
ಹಿರಿಯೂರು (ಚಿತ್ರದುರ್ಗ): ತಾಲ್ಲೂಕಿನ ವಾಣಿವಿಲಾಸ ರಸ್ತೆಯ ಬಿರೇನಹಳ್ಳಿ ಸಮೀಪ ಕಾರು ಮರಕ್ಕೆ ಡಿಕ್ಕಿ ಹೊಡೆದು ಮೂವರು ಮಹಿಳೆಯರು ಮೃತಪಟ್ಟ ಘಟನೆ ಮಂಗಳವಾರ ಬೆಳಿಗ್ಗೆ ನಡೆದಿದೆ.
ಬೆಂಗಳೂರಿನ ಆರ್‌ಆರ್ ನಗರದ ನಿವಾಸಿಗಳಾದ ವಿಶಾಲಾಕ್ಷಿ (70), ರೇಣುಕಾದೇವಿ (39) ಮತ್ತು ಸುಧಿಕ್ಷಾ (17) ಮೃತಪಟ್ಟವರು. ಪ್ರತೀಕ್ಷಾ (13) ಗಂಭೀರವಾಗಿ ಗಾಯಗೊಂಡಿದ್ದು, ಹಿರಿಯೂರು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.
ಭದ್ರಾವತಿಯಲ್ಲಿ ಮದುವೆ ಮುಗಿಸಿಕೊಂಡು ಮಂಗಳವಾರ ನಸುಕಿನಲ್ಲಿ ಬೆಂಗಳೂರಿಗೆ ಮರಳುತ್ತಿದ್ದರು. ರೇಣುಕಾದೇವಿ ಕಾರು ಚಾಲನೆ ಮಾಡುತ್ತಿದ್ದರು. ಬಿರೇನಹಳ್ಳಿ ಸಮೀಪ ಚಾಲಕಿಯ ನಿಯಂತ್ರಣ ಕಳೆದುಕೊಂಡ ಕಾರು ಮರಕ್ಕೆ ಅಪ್ಪಳಿಸಿದೆ. ವಿಶಾಲಾಕ್ಷಿ ಹಾಗೂ ಸುಧಿಕ್ಷಾ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ರೇಣುಕಾದೇವಿ ಆಸ್ಪತ್ರೆಗೆ ಸಾಗಿಸುವಾಗ ಮೃತಪಟ್ಟಿದ್ದಾರೆ ಎಂದು ಹಿರಿಯೂರು ಗ್ರಾಮಾಂತರ ಠಾಣೆಯ ಪೊಲೀಸರು ತಿಳಿಸಿದ್ದಾರೆ.




