ಉಡುಪಿ:”ಕಾಂಗ್ರೆಸ್ಸಿಗರ ವೋಟ್ ಬ್ಯಾಂಕ್ ರಾಜಕಾರಣ ಉಡುಪಿಯಲ್ಲಿ ನಡೆಯುವುದಿಲ್ಲ”: ಸಿದ್ದುಗೆ ರಘುಪತಿ ಭಟ್ ಗುದ್ದು!
ಉಡುಪಿ: “ಶಾಸಕ ರಘುಪತಿ ಭಟ್ ಯಾರು ಎಂದು ಪ್ರಶ್ನಿಸುವ ಸಿದ್ದರಾಮಯ್ಯ ಅವರೇ, ನಾನು ಜನರಿಂದ ಆಯ್ಕೆಯಾದವನು. ನಿಮ್ಮ ಹಾಗೆ ಸ್ವಕ್ಷೇತ್ರದಲ್ಲಿ ಜನರಿಂದ ತಿರಸ್ಕೃತಗೊಂಡು, ಬೇರೆಯವರ ಕ್ಷೇತ್ರದ ಮೇಲೆ ಅವಲಂಬಿತನಾದವನಲ್ಲ. ನನ್ನ ಕ್ಷೇತ್ರದ ಸಮಸ್ಯೆಗೆ ಧ್ವನಿಯಾಗುವುದು ನನಗೆ ಸಂವಿಧಾನ ಕಲ್ಪಿಸಿದ ಹಕ್ಕು. ಅದನ್ನು ನಿಮ್ಮಿಂದ ಕಲಿಯಬೇಕಿಲ್ಲ’ ಎಂದು ಬಿಜೆಪಿ ಶಾಸಕ ರಘುಪತಿ ಭಟ್ ಟ್ವೀಟ್ ಮೂಲಕ ತಿರುಗೇಟು ನೀಡಿದ್ದಾರೆ.
ಈ ಮೊದಲು ,ಸಮವಸ್ತ್ರ ಕಡ್ಡಾಯ ಮಾಡಲು ರಘುಪತಿ ಭಟ್ ಯಾರು ಎಂದು ಸಿದ್ಧರಾಮಯ್ಯ ಪ್ರಶ್ನಿಸಿದ್ದರು. ಇದಕ್ಕೆ ಉತ್ತರಿಸಿರುವ ರಘುಪತಿ ಭಟ್ , `ಬಾದಾಮಿ ಶಾಸಕ ಸಿದ್ದರಾಮಯ್ಯ ಅವರು ತಮ್ಮ ಸ್ಥಾನದ ಘನತೆಗೆ ತಕ್ಕಂತೆ ಮಾತನಾಡಬೇಕು. ಶೈಕ್ಷಣಿಕ ವಾತಾವರಣದಲ್ಲಿ ತಮಗೆ ಇಷ್ಟ ಬಂದಂತಿರಲು ಅದೇನು ಕಾಂಗ್ರೆಸ್ ಪಕ್ಷದ ಕಚೇರಿಯಲ್ಲ, ಮಾಡಿದ್ದನ್ನೆಲ್ಲ ಒಪ್ಪಲು ನಾವು ರಾಹುಲ್ ಗಾಂಧಿಯೂ ಅಲ್ಲ. ನಿಯಮಕ್ಕೆ ಬದ್ಧರಾಗುವುದಾದರೆ ಬರಲಿ, ಇಲ್ಲದಿದ್ದರೆ ಮನೆಯಲ್ಲಿರಲಿ. ನಮ್ಮದು ಇದೇ ಸ್ಪಷ್ಟ ನಿಲುವು’ ಎಂದು ತಿಳಿಸಿದ್ದಾರೆ.
‘ಸಿದ್ದರಾಮಯ್ಯ 2013ರಿಂದ 2018ರ ವರೆಗೆ ಸಿಎಂ ಆಗಿದ್ದಾಗಲೂ ಈಗ ವಿವಾದವೆನಿಸಿರುವ ಕಾಲೇಜಿನಲ್ಲಿ ಸಮವಸ್ತ್ರದ ನಿಯಮ ಇತ್ತು. ಯಾರೂ ಈ ಹಿಂದೆ ಹಿಜಾಬ್(ಸ್ಕಾರ್ಫ್) ನಮ್ಮ ಹಕ್ಕು ಎಂದು ಪ್ರತಿಭಟಿಸಿಲ್ಲ. ಈಗ ಹಿಜಾಬ್ ಮೂಲಭೂತ ಹಕ್ಕು ಎನ್ನುವ ಸಿದ್ದರಾಮಯ್ಯ ಆಗ ಎಲ್ಲಿದ್ದರು? ಕಾಂಗ್ರೆಸ್ಸಿಗರ ವೋಟ್ ಬ್ಯಾಂಕ್ ರಾಜಕಾರಣ ಉಡುಪಿಯಲ್ಲಿ ನಡೆಯುವುದಿಲ್ಲ’ ಎಂದು ರಘುಪತಿ ಭಟ್ ಹೇಳಿದ್ದಾರೆ