ದ್ವೇಷ ಸಾಧನೆಗೆ ಮಹಿಳಾ ಅಧಿಕಾರಿಗಳು ಬಲಿ:
ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ವಿರುದ್ಧ ವ್ಯಾಪಕ ಆಕ್ರೋಶ
ಬೆಳ್ತಂಗಡಿ: ಬಿಜೆಪಿ ನಾಯಕನೊರ್ವನ ಮರಕಳ್ಳತನವನ್ನು ಭೇದಿಸಿದ ಅರಣ್ಯ ಸಂಚಾರಿ ದಳದ ಮಹಿಳಾ ಅಧಿಕಾರಿಯನ್ನು ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಬೀದರ್ ಜಿಲ್ಲೆಗೆ ವರ್ಗಾವಣೆ ಮಾಡುವ ಮೂಲಕ ಹಗೆತನ ಸಾಧಿಸಿದ್ದಾರೆ ಎಂಬ ಆರೋಪ ವ್ಯಕ್ತವಾಗಿದೆ.




ಬೆಳ್ತಂಗಡಿಯ ಪ್ರತಿಷ್ಠಿತ ನೂಜೋಡಿ ಮನೆತನದ ಸೊಸೆ ಸಂಧ್ಯಾ ಅವರು ಉಡುಪಿ ಅರಣ್ಯ ಸಂಚಾರಿ ದಳದ ಅರಣ್ಯಾಧಿಕಾರಿಯಾಗಿದ್ದರು. ಮಂಗಳೂರು ಅರಣ್ಯ ಸಂಚಾರಿ ದಳದ ಪ್ರಬಾರ ಅಧಿಕಾರಿಯೂ ಕಾರ್ಯನಿರ್ವಹಿಸುತ್ತಿದ್ದರು. ಎರಡು ತಿಂಗಳ ಹಿಂದೆ ಬೆಳ್ತಂಗಡಿ ತಾಲೂಕಿನ ಕಲ್ಮಂಜ ಗ್ರಾಮದಲ್ಲಿ ಯಾವುದೇ ಅನುಮತಿ ಇಲ್ಲದೆ ಕೋಟ್ಯಾಂತರ ರೂಪಾಯಿ ಮೌಲ್ಯದ ಮರಗಳನ್ನು ಪಂಚಮುಖಿ ಬಾಲಕೃಷ್ಣ ಶೆಟ್ಟಿ ಎಂಬಾತ ಕಡಿದುರುಳಿಸಿದ್ದ. ಈ ಸ್ಥಳೀಯರ ದೂರಿನಂತೆ ತನ್ನ ತಂಡದೊಂದಿಗೆ ಧಾಳಿ ನಡೆಸಿದಾಗ ಹೆಬ್ಬಲಸು, ಹಲಸು, ಬೋಗಿ, ಕಿರಲ್ ಬೋಗಿ, ಸಾಗುವಾನಿ ಸೇರಿದಂತೆ ಬೆಲೆಬಾಳುವ ಮರಗಳನ್ನು ಕಡಿದು ಹಾಕಿರುವುದು ಪತ್ತೆಯಾದವು. ಈ ಸಂಬಂಧ ಪ್ರಕರಣ ದಾಖಲಿಸಿದ ಅರಣ್ಯಾಧಿಕಾರಿ ಸಂಧ್ಯಾ, ಸ್ಥಳದಲ್ಲಿದ್ದ ವಾಹನಗಳ ಸಮೇತ ಮರಗಳನ್ನು ಮುಟ್ಟುಗೋಲು ಹಾಕಿಕೊಂಡರು.
ಪ್ರಕರಣದ ಬಗ್ಗೆ ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿಗೆ ವಿಷಯ ತಿಳಿದು ತನಿಖೆ ನಡೆಸಿ ಬೆಳ್ತಂಗಡಿ ವಲಯ ಅರಣ್ಯ ಇಲಾಖೆಯ ನಾಲ್ಕು ಸಿಬ್ಬಂದಿಗಳನ್ನು ಅಮಾನತು ಮಾಡಿದರು. ಇದರಿಂದಾಗಿ ಕಂಗೆಟ್ಟ ಶಾಸಕ ಹರೀಶ್ ಪೂಂಜಾ ಈ ಮಹಿಳಾ ಅಧಿಕಾರಿ ಮೇಲೆ ದ್ವೇಷದಿಂದ ದೂರದ ಬೀದರ್ ಜಿಲ್ಲೆಗೆ ವರ್ಗಾವಣೆ ಮಾಡಲು ಯಶಸ್ವಿಯಾಗಿದ್ದಾರೆ. ಸ್ವತಃ ತಾನೇ ಮುಂದೆ ನಿಂತು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಮೂಲಕ ವರ್ಗಾವಣೆ ಮಾಡಲಾಗಿದೆ. ಈ ಸಂಬಂಧ ಶಾಸಕ ಹರೀಶ್ ಪೂಂಜಾ ಬಸವರಾಜ್ ಬೊಮ್ಮಾಯಿ ಅವರಿಗೆ ಬರೆದ ಪತ್ರ ಹಾಗೂ ಮುಖ್ಯಮಂತ್ರಿಗಳ ಆದೇಶ ಸಾಮಾಜಿಕ ಜಾಲತಾಣದಲ್ಲಿ ಬಾರಿ ಸದ್ದು ಮಾಡುತ್ತಿದೆ.
ಬಿಲ್ಲವ ಸಂಘಕ್ಕೆ ದೂರು:
ಈ ನಡುವೆ ಅರಣ್ಯ ಸಂಚಾರಿ ದಳದ ಮಹಿಳಾ ಅಧಿಕಾರಿ ಸಂಧ್ಯಾ ಅವರನ್ನು ಬೀದರ್ ಜಿಲ್ಲೆಗೆ ವರ್ಗಾವಣೆ ಮಾಡಿದ ಬಗ್ಗೆ ನ್ಯಾಯಕೋರಿ ಬಿಲ್ಲವ ಸಂಘಕ್ಕೆ ದೂರು ನೀಡಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಪತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇತ್ತೀಚೆಗಷ್ಟೇ ಶ್ರೀ ನಾರಾಯಣ ಗುರುಗಳ ಸ್ತಬ್ಧಚಿತ್ರ ನಿರಾಕರಿಸಿದ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಬಿಲ್ಲವ ಸಂಘಟನೆಗಳು ಒಂದಾಗಿ ಹೋರಾಟ ನಡೆಸಿದ್ದು , ಇದೀಗ ಬಿಲ್ಲವ ಸಮುದಾಯದ ಮಹಿಳಾ ಅಧಿಕಾರಿಯ ವರ್ಗಾವಣೆಯಲ್ಲಿ ಶಾಸಕ ಹರೀಶ್ ಪೂಂಜಾರ ದ್ವೇಷ ಸಾಧನೆ ವಿರುದ್ಧ ಮತ್ತೊಂದು ಸುತ್ತಿನ ಹೋರಾಟಕ್ಕೆ ಬಿಲ್ಲವ ಸಂಘಟನೆಗಳು ಸಜ್ಜಾಗುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿದೆ.




