February 1, 2026

ಮಗಳ ಚಿತ್ರ ಬ್ರಾಡ್‌ಕಾಸ್ಟರ್ ಮೂಲಕ ವೈರಲ್:
ಪ್ರತಿಕ್ರಿಯೆ ನೀಡಿದ ವಿರಾಟ್ ಕೊಹ್ಲಿ ದಂಪತಿ

0
virat_anushka_insta_1200x768.jpeg

ಸೌತ್ ಆಫ್ರಿಕಾ: ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಸೆಲೆಬ್ರಿಟಿ ಜೋಡಿಗೆ ಹೆಣ್ಣು ಮಗು ಜನಿಸಿ ಒಂದು ವರ್ಷ ಕಳೆದಿದೆ. ಈವರೆಗೂ ತಮ್ಮ ಪುತ್ರಿಯ ಮುಖವನ್ನು ಜಗತ್ತಿಗೆ ತೋರಿಸಿರಲಿಲ್ಲ. ಆದರೆ ನಿನ್ನೆ (ಜ.23) ನಡೆದ ಭಾರತ ಹಾಗೂ ದಕ್ಷಿಣ ಆಫ್ರಿಕಾ ಏಕದಿನ ಸರಣಿಯ ಮೂರನೇ ಪಂದ್ಯದ ವೇಳೆ ಮಗಳ ಜೊತೆ ಅನುಷ್ಕಾ ಶರ್ಮಾ ಮ್ಯಾಚ್ ನೋಡುತ್ತಿರುವ ದೃಶ್ಯವನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿಯಲಾಯಿತು. ಸ್ಟಾರ್ ಸ್ಪೋರ್ಟ್ಸ್ ವಾಹಿನಿ ಮೂಲಕ ವಿಶ್ವಾದ್ಯಂತ ಆ ದೃಶ್ಯ ಪ್ರಸಾರ ಆಯಿತು. ಆ ಮೂಲಕ ಅನುಷ್ಕಾ ಶರ್ಮಾ-ವಿರಾಟ್ ಕೊಹ್ಲಿ ಮಗಳ ಮುಖವನ್ನು ಇಡೀ ಜಗತ್ತಿಗೆ ತೋರಿಸಲಾಯಿತು.

ಈ ಕುರಿತಂತೆ ಸ್ಟಾರ್ ದಂಪತಿ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ‘ನಮಗೆ ಗೊತ್ತಿಲ್ಲದಂತೆಯೇ ವಿಡಿಯೋ ಚಿತ್ರಿಸಲಾಯಿತು’ ಎಂದು ಅವರು ಹೇಳಿದ್ದಾರೆ. ಆದರೂ ಕೂಡ ಮಗಳ ಮುಖ ತೋರಿಸಬಾರದು ಎಂಬ ತಮ್ಮ ನಿರ್ಧಾರ ಈಗಲೂ ಬದಲಾಗಿಲ್ಲ ಎಂದು ಅನುಷ್ಕಾ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಹೇಳಿದ್ದಾರೆ.

ಸೋಶಿಯಲ್​ ಮೀಡಿಯಾದಲ್ಲಿ ಈ ದಂಪತಿ ಹೇಳಿಕೆ ನೀಡಿದ್ದಾರೆ. ತಮ್ಮ ಅರಿವಿಗೆ ಬಾರದಂತೆಯೇ ಮಗಳು ವಮಿಕಾಳ ಮುಖವನ್ನು ತೋರಿಸಲಾಗಿರುವ ಬಗ್ಗೆ ಅವರಿಗೆ ಬೇಸರ ಇದೆ. ಮಗಳು ದೊಡ್ಡವಳಾಗುವವರೆಗೂ ಆಕೆಯನ್ನು ಜಗತ್ತಿಗೆ ಪರಿಚಯಿಸಬಾರದು ಎಂಬ ಈ ದಂಪತಿಯ ನಿರ್ಧಾರವನ್ನು ಜಗತ್ತಿನಾದ್ಯಂತ ಬಹುತೇಕ ಮಾಧ್ಯಮಗಳು ಗೌರವಿಸಿವೆ. ಆ ಕುರಿತು ಕೂಡ ಅನುಷ್ಕಾ ಶರ್ಮಾ-ವಿರಾಟ್​ ಕೊಹ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

‘ಎಲ್ಲರಿಗೂ ಹಾಯ್​.. ನಿನ್ನೆ ಸ್ಟೇಡಿಯಂನಲ್ಲಿ ನಮ್ಮ ಮಗಳ ಪೋಟೋವನ್ನು ಸೆರೆಹಿಡಿಯಲಾಯಿತು ಮತ್ತು ಅದನ್ನು ವೈರಲ್​ ಮಾಡಲಾಗಿದೆ ಎಂಬುದು ನಮಗೆ ತಿಳಿದುಬಂದಿದೆ. ನಮಗೆ ಗೊತ್ತಿಲ್ಲದಂತೆಯೇ ಅದನ್ನು ಚಿತ್ರಿಸಲಾಗಿದೆ. ನಮ್ಮನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿಯಲಾಗುತ್ತಿದೆ ಎಂಬುದು ನಮಗೆ ತಿಳಿದಿರಲಿಲ್ಲ. ಮಗಳ ವಿಚಾರದಲ್ಲಿ ನಮ್ಮ ನಿರ್ಧಾರ ಮತ್ತು ಮನವಿ ಮೊದಲಿನಂತೆಯೇ ಇರಲಿದೆ. ವಮಿಕಾಳ ಫೋಟೋ ಕ್ಲಿಕ್​ ಮಾಡದಿದ್ದರೆ, ಪ್ರಕಟ ಮಾಡದಿದ್ದರೆ ಅದಕ್ಕಾಗಿ ಧನ್ಯವಾದಗಳು’ ಎಂದು ಅನುಷ್ಕಾ ಶರ್ಮಾ ಮತ್ತು ವಿರಾಟ್​ ಕೊಹ್ಲಿ ಇನ್​ಸ್ಟಾಗ್ರಾಮ್​ ಸ್ಟೋರಿ ಮೂಲಕ ತಿಳಿಸಿದ್ದಾರೆ.

ಮಗಳ ಮುಖವನ್ನು ಜಗತ್ತಿಗೆ ತೋರಿಸಲು ಅನುಷ್ಕಾ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಅವರಿಗೆ ಇಷ್ಟ ಇಲ್ಲ. ಅದನ್ನು ಅವರು ಕಳೆದ ವರ್ಷ ಜನವರಿಯಲ್ಲೇ ಸ್ಪಷ್ಟಪಡಿಸಿದ್ದರು. ಮಗು ಜನಿಸಿದ ಕೆಲವೇ ದಿನಗಳಲ್ಲಿ ಅವರು ತಮ್ಮ ಈ ನಿರ್ಧಾರವನ್ನು ತಿಳಿಸಿದ್ದರು. ಅನುಷ್ಕಾ ಶರ್ಮಾ, ವಿರಾಟ್ ಕೊಹ್ಲಿ ಹೋದಲ್ಲಿ-ಬಂದಲ್ಲಿ ಕ್ಯಾಮೆರಾಗಳು ಅವರನ್ನು ಮುತ್ತಿಕೊಳ್ಳುತ್ತವೆ. ಆದರೆ ಮಗಳ ಫೋಟೋ ಅಥವಾ ವಿಡಿಯೋವನ್ನು ಸೆರೆ ಹಿಡಿಯಬಾರದು ಎಂದು ಈ ದಂಪತಿ ಮಾಡಿಕೊಂಡ ಮನವಿಗೆ ಎಲ್ಲರೂ ಬೆಲೆ ನೀಡಿದ್ದರು. ಆದರೆ ಸ್ಟಾರ್ ಸ್ಪೋರ್ಟ್ಸ್ ವಾಹಿನಿ ಕಡೆಯಿಂದ ವಮಿಕಾಳ ವಿಡಿಯೋ ಮೊದಲ ಬಾರಿಗೆ ಪ್ರಸಾರ ಆಗಿದೆ.

Leave a Reply

Your email address will not be published. Required fields are marked *

error: Content is protected !!