November 29, 2026

ಪೂರ್ವಿಕ ಸಜ್ಜನರ ಅನುಕರಣೆಯನ್ನು ತಿರಸ್ಕರಿಸುವವನು ನೈಜ ವಿಶ್ವಾಸಿಯಾಗಲಾರ: ಅನಸ್ ಸಿದ್ದೀಕಿ

0
image_editor_output_image-567106084-1795963763438

ವಿಟ್ಲ:ಕುರ್‌ಆನ್ ಮತ್ತು ಹದೀಸ್‌ಗಳಲ್ಲಿ ಅಗಾಧ ಪಾಂಡಿತ್ಯ ಹೊಂದಿದ್ದ ಪೂರ್ವಕಾಲದ ಸಚ್ಚರಿತ ಮಹಾತ್ಮರ ನಡವಳಿಕೆ, ಆಚಾರ-ವಿಚಾರ ಹಾಗೂ ನಂಬಿಕೆಗಳನ್ನು ಅನುಸರಿಸದೆ, ಅವುಗಳನ್ನು ತಿರಸ್ಕರಿಸಿ ಕೇವಲ ಯುಕ್ತಿಯ ಆಧಾರದಲ್ಲಿ ಧರ್ಮವನ್ನು ವ್ಯಾಖ್ಯಾನಿಸಲು ಹೊರಟರೆ ಆತ ಧರ್ಮಭ್ರಷ್ಟನಾಗುತ್ತಾನೆ ಹೊರತು ನೈಜ ಮುಸ್ಲಿಮನಾಗಲು ಸಾಧ್ಯವಿಲ್ಲ ಎಂದು ಖ್ಯಾತ ವಿದ್ವಾಂಸ ಅನಸ್ ಸಿದ್ದೀಕಿ ಅಲ್ ಕಾಮಿಲ್ ಸಖಾಫಿ ಹೇಳಿದರು.

ಪ್ರವಾದಿ ಮುಹಮ್ಮದ್ (ಸ.ಅ) ಅವರ ಅನುಚರರಾದ ಸ್ವಹಾಬಿಗಳು ಪ್ರವಾದಿಯವರನ್ನು ಅಪಾರವಾಗಿ ಪ್ರೀತಿಸಿ, ಗೌರವಿಸಿ, ಅವರ ನಡವಳಿಕೆಯನ್ನು ಅನುಸರಿಸುತ್ತಿದ್ದರು. ಅವರ ಈ ಅನುಕರಣೆಯನ್ನು ಯಾರೂ ಆಕ್ಷೇಪಾರ್ಹವಾಗಿ ಕಂಡಿರಲಿಲ್ಲ ಎಂದು ಅವರು ಹೇಳಿದರು.

ಎಸ್‌ವೈಎಸ್ ವಿಟ್ಲ ಝೋನ್ ವತಿಯಿಂದ ಸಮಸ್ತ ಶತಮಾನೋತ್ಸವ ಪ್ರಚಾರದ ಭಾಗವಾಗಿ ಒಕ್ಕೆತ್ತೂರು ಗೋಲ್ಡನ್ ವಿಲ್ಲಾದಲ್ಲಿ ಆಯೋಜಿಸಲಾಗಿದ್ದ ‘ಅಸ್ಸುನ್ನ: ತಾತ್ವಿಕ ಸಮಾವೇಶ’ ಹಾಗೂ ಅಸ್ಸಯ್ಯಿದ್ ಅಲೀ ಭಾಫಕಿ ತಂಙಳ್ ಅನುಸ್ಮರಣಾ ಸಮಾವೇಶದಲ್ಲಿ ಮುಖ್ಯ ಭಾಷಣಕಾರರಾಗಿ ಅವರು ಮಾತನಾಡಿದರು.

ಎಸ್‌ವೈಎಸ್ ವಿಟ್ಲ ಝೋನ್ ಅಧ್ಯಕ್ಷ ರಹೀಂ ಸಖಾಫಿ ವಿಟ್ಲ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸುನ್ನೀ ಫೈಝಿ ಉಸ್ತಾದ್ ಪ್ರಾರ್ಥನೆಗೆ ನೇತೃತ್ವ ನೀಡಿದರು. ರಾಜ್ಯ ನಾಯಕ ಡಿ.ಕೆ. ಉಮರ್ ಸಖಾಫಿ ಕಂಬಳಬೆಟ್ಟು ಕಾರ್ಯಕ್ರಮ ಉದ್ಘಾಟಿಸಿ, ನೂರು ವರ್ಷಗಳ ಇತಿಹಾಸ ಹೊಂದಿರುವ ಸಮಸ್ತ ಸಂಘಟನೆ ರಚನೆಯಾಗಲು ಕಾರಣವಾದ ಸಂದರ್ಭಗಳನ್ನು ವಿವರಿಸಿದರು.

ಅಸ್ಸಯ್ಯಿದ್ ಶಿಹಾಬುದ್ದೀನ್ ತಂಙಳ್ ಮದಕ ಶುಭ ಹಾರೈಸಿ ಮಾತನಾಡಿದರು. ಅಸ್ಸಯ್ಯಿದ್ ಹಬೀಬುಲ್ಲಾ ಪೂಕೋಯ ತಂಙಳ್ ಪೆರುವಾಯಿ ಅನುಸ್ಮರಣಾ ಭಾಷಣ ಮಾಡಿದರು.

ಯೂನುಸ್ ಇಮ್ದಾದಿ ಮಂಗಳಪದವು ಸ್ವಾಗತಿಸಿದರು. ಸಿದ್ದೀಕ್ ಸಖಾಫಿ ಪೆರುವಾಯಿ ವಂದಿಸಿದರು. ಎಸ್‌ವೈಎಸ್ ವಿಟ್ಲ ಝೋನ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಖಾದರ್ ಕೊಡುಂಗಾಯಿ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *

error: Content is protected !!