ಚಿಕ್ಕಮಗಳೂರು: ಬಂದೂಕು ಹಿಡಿದು ವಲಸೆ ಕಾರ್ಮಿಕರ ಮೇಲೆ ಹಲ್ಲೆ: ಆಘಾತಕಾರಿ ವಿಡಿಯೊ ವೈರಲ್: FIR ದಾಖಲು
ಚಿಕ್ಕಮಗಳೂರು: ಕಾಫಿ ಎಸ್ಟೇಟ್ ಮಾಲೀಕನೊಬ್ಬ ಒಂದು ಕೈಯಲ್ಲಿ ಬಂದೂಕು ಹಾಗೂ ಇನ್ನೊಂದು ಕೈಯಲ್ಲಿ ದೊಣ್ಣೆ ಹಿಡಿದು ವಲಸೆ ಕಾರ್ಮಿಕರ ಮೇಲೆ ಮನಸೋಇಚ್ಛೆ ಹಲ್ಲೆ ನಡೆಸಿರುವ ಆಘಾತಕಾರಿ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಚಿಕ್ಕಮಗಳೂರು ತಾಲ್ಲೂಕಿನ ಬಸಗೂಡು ಗ್ರಾಮದಲ್ಲಿ ಈ ಅಮಾನವೀಯ ಘಟನೆ ನಡೆದಿದ್ದು, ಹಲ್ಲೆ ನಡೆಸಿದ ಕಾಫಿ ಎಸ್ಟೇಟ್ ಮಾಲೀಕರಾದ ಭರತ್ ಮತ್ತು ಸತ್ಯಕೀರ್ತಿ ಎಂಬುವವರ ವಿರುದ್ಧ ಮಲ್ಲಂದೂರು ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ (FIR) ದಾಖಲಾಗಿದೆ.
ಎಸ್ಟೇಟ್ ಮಾಲೀಕ ಭರತ್ ಅವರ ಅನುಚಿತ ವರ್ತನೆಯನ್ನು ಪ್ರಶ್ನಿಸಿದ್ದಕ್ಕಾಗಿ ಈ ಗಲಾಟೆ ನಡೆದಿದೆ ಎಂದು ಕಾರ್ಮಿಕ ಮಹಿಳೆ ಮೀನಾ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ‘‘ಎಸ್ಟೇಟ್‌ನಲ್ಲಿ ಕಾರ್ಮಿಕರು ಮತ್ತು ಮಹಿಳೆಯರನ್ನು ಜೀತದಾಳುಗಳಂತೆ ನಡೆಸಿಕೊಳ್ಳಲಾಗುತ್ತಿದೆ. ಮಹಿಳೆಯರು ಮತ್ತು ಮಕ್ಕಳು ಎನ್ನದೆ ಮಾನಸಿಕ ಹಾಗೂ ದೈಹಿಕವಾಗಿ ಕಿರುಕುಳ ನೀಡಿ, ಬಂದೂಕು ತೋರಿಸಿ ಜೀವ ಬೆದರಿಕೆ ಹಾಕಲಾಗಿದೆ’’ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಮಹಿಳೆ ನೀಡಿದ ದೂರಿನ ಆಧಾರದ ಮೇಲೆ ಮಲ್ಲಂದೂರು ಪೊಲೀಸರು ಆರೋಪಿಗಳಾದ ಭರತ್ ಮತ್ತು ಸತ್ಯಕೀರ್ತಿ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) ಹಾಗೂ ಶಸ್ತ್ರಾಸ್ತ್ರ ಕಾಯ್ದೆಯ (Arms Act) ವಿವಿಧ ಕಲಂಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ದೂರು ದಾಖಲಾಗುತ್ತಿದ್ದಂತೆಯೇ ಆರೋಪಿ ಸಹೋದರರಿಬ್ಬರೂ ತಲೆಮರೆಸಿಕೊಂಡಿದ್ದು, ಅವರ ಬಂಧನಕ್ಕಾಗಿ ಪೊಲೀಸರು ವಿಶೇಷ ತಂಡವನ್ನು ರಚಿಸಿ ಬಲೆ ಬೀಸಿದ್ದಾರೆ.




