ಕಾಸರಗೋಡು: ಉದ್ಯೋಗದ ಹೆಸರಿನಲ್ಲಿ 3.75 ಲಕ್ಷ ರೂ. ವಂಚನೆ: ತ್ರಿಶೂರಿನಲ್ಲಿ ಆರೋಪಿಯ ಬಂಧನ
ಕಾಸರಗೋಡು: ಕೆನರಾ ಬ್ಯಾಂಕ್‌ನಲ್ಲಿ ಉದ್ಯೋಗ ಕೊಡಿಸುವುದಾಗಿ ಭರವಸೆ ನೀಡಿ ಯುವಕನಿಂದ 3.75 ಲಕ್ಷ ರೂ. ವಂಚಿಸಿದ ಪ್ರಕರಣದಲ್ಲಿ, ಹಲವು ವಂಚನೆ ಪ್ರಕರಣಗಳ ಆರೋಪಿಯಾಗಿರುವ ಯುವಕನನ್ನು ಹೊಸದುರ್ಗ ಪೊಲೀಸರು ತ್ರಿಶೂರಿನಲ್ಲಿ ಬಂಧಿಸಿದ್ದಾರೆ.
ಎರ್ನಾಕುಳಂ ಇಡಪ್ಪಳ್ಳಿ ನಿವಾಸಿ ಕಿಶೋರ್ ಶಂಕರ್ ಬಂಧಿತ ಆರೋಪಿ.
ಪುತ್ತುಕೈ ನಿವಾಸಿ ಸಿದ್ದಾರ್ಥ್ ಅವರನ್ನು ನವೆಂಬರ್ 16ರಂದು ಪಳನಿಯಲ್ಲಿ ಪರಿಚಯಿಸಿಕೊಂಡ ಆರೋಪಿ, ಕಾಸರಗೋಡು ವಿದ್ಯಾನಗರದ ಕೆನರಾ ಬ್ಯಾಂಕ್‌ನ ಎನ್‌ಆರ್‌ಐ ವಿಭಾಗದ ಮ್ಯಾನೇಜರ್ ಹಾಗೂ ತನ್ನ ಹೆಸರು ಶ್ರೀರಾಮ್ ಎಂದು ಸುಳ್ಳು ಹೇಳಿ ವಿಶ್ವಾಸ ಗಳಿಸಿದ್ದ. ಬಳಿಕ ಬ್ಯಾಂಕ್‌ನಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ, ನವೆಂಬರ್ 16ರಿಂದ 23ರ ನಡುವೆ ಹಲವು ಕಂತುಗಳಲ್ಲಿ 3,75,151 ರೂ ಹಣವನ್ನು ತನ್ನ ಖಾತೆಗೆ ವರ್ಗಾಯಿಸಿಕೊಂಡಿದ್ದ.
ಕೆಲಸ ಸಿಗದಿದ್ದಾಗ ಆ ಸಂಬಂಧ ನವೆಂಬರ್ 25ರಂದು ಹೊಸದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಕಾಂಞಂಗಾಡ್ ಡಿವೈಎಸ್‌ಪಿ ಅವರ ಸೂಚನೆಯಂತೆ ವಿಶೇಷ ತನಿಖಾ ತಂಡ ರಚಿಸಿ, ಸೈಬರ್ ತಜ್ಞರು ಹಾಗೂ ತ್ರಿಶೂರು ನಗರ ಪೊಲೀಸರ ಸಹಕಾರದೊಂದಿಗೆ ತನಿಖೆ ನಡೆಸಲಾಯಿತು.




