November 13, 2026

ಉಡುಪಿ: ರವಿ ಪೂಜಾರಿ ತಾಯಿ ನಿಧನ: ಅಂತ್ಯಕ್ರಿಯೆಯಲ್ಲಿ ಭಾಗಿಯಾಗಲು ಕೋರ್ಟ್ ಅನುಮತಿ

96cdc696-d3de-41f6-8b8e-83d11492899e

ಉಡುಪಿ: ಕುಖ್ಯಾತ ಅಂಡರ್ ವರ್ಲ್ಡ್ ಡಾನ್ ರವಿ ಪೂಜಾರಿ ಅವರ ತಾಯಿ ಸುಶೀಲಾ ಪೂಜಾರ್ತಿ (86) ಅವರು ವಯೋಸಹಜ ಅನಾರೋಗ್ಯ ಹಾಗೂ ಹೃದಯಾಘಾತದಿಂದ ಗುರುವಾರ ರಾತ್ರಿ ನಿಧನ ಹೊಂದಿದ್ದಾರೆ. ಮೃತರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ರವಿ ಪೂಜಾರಿಗೆ ನ್ಯಾಯಾಲಯವು ಷರತ್ತುಬದ್ಧ ಅನುಮತಿ ನೀಡಿದ್ದು, ಪೊಲೀಸ್ ಬಿಗಿ ಭದ್ರತೆಯಲ್ಲಿ ಆತನನ್ನು ಉಡುಪಿಗೆ ಕರೆತರಲಾಗುತ್ತಿದೆ.

ದಿವಂಗತ ಸುಶೀಲಾ ಪೂಜಾರ್ತಿ ಅವರಿಗೆ ಐವರು ಮಕ್ಕಳಿದ್ದು, ಇಬ್ಬರು ಪುತ್ರಿಯರು ಹಾಗೂ ರವಿ ಪೂಜಾರಿ ಸೇರಿದಂತೆ ಮೂವರು ಗಂಡು ಮಕ್ಕಳಿದ್ದಾರೆ. ಶನಿವಾರ ಬೆಳಗ್ಗೆ 11 ಗಂಟೆಗೆ ಉಡುಪಿ ಜಿಲ್ಲೆಯ ಮಲ್ಪೆಯ ನೆರ್ಗಿಯಲ್ಲಿರುವ ಹಿರಿಯ ಮನೆಯಲ್ಲಿ ಅವರ ಅಂತ್ಯಸಂಸ್ಕಾರ ನೆರವೇರಲಿದೆ. ತಾಯಿಯ ಅಂತಿಮ ವಿಧಿ-ವಿಧಾನಗಳಲ್ಲಿ ಪಾಲ್ಗೊಳ್ಳಲು ಉಡುಪಿಯ ಸ್ವಗ್ರಾಮಕ್ಕೆ ತೆರಳಲು ರವಿ ಪೂಜಾರಿಗೆ ನ್ಯಾಯಾಲಯ ಅನುಮತಿ ನೀಡಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ಮಾಹಿತಿ ನೀಡಿದ್ದಾರೆ.

ನ್ಯಾಯಾಲಯದ ಆದೇಶದಂತೆ, ಶುಕ್ರವಾರ ಮಧ್ಯಾಹ್ನವೇ ರವಿ ಪೂಜಾರಿಯನ್ನು ಬೆಂಗಳೂರು ಜೈಲಿನಿಂದ ಕಟ್ಟುನಿಟ್ಟಿನ ಪೊಲೀಸ್ ಎಸ್ಕಾರ್ಟ್ ಭದ್ರತೆಯಲ್ಲಿ ಉಡುಪಿಗೆ ಕರೆತರಲಾಗಿದೆ. ಶನಿವಾರ ಬೆಳಗ್ಗೆ ನಡೆಯಲಿರುವ ಅಂತ್ಯಕ್ರಿಯೆಯಲ್ಲಿ ಭಾಗಿಯಾದ ಬಳಿಕ ಆತನನ್ನು ವಾಪಸ್ ಕರೆದುಕೊಂಡು ಹೋಗುವಂತೆ ನ್ಯಾಯಾಲಯ ಸೂಚಿಸಿದೆ. ಬೆಂಗಳೂರಿನ ಆಡುಗೋಡಿಯ ಸಿಟಿ ಆರ್ಮ್ಡ್ ರಿಸರ್ವ್ ವಿಭಾಗದ ಡಿಸಿಪಿ ಹಾಗೂ ಜೈಲು ಅಧಿಕಾರಿಗಳ ವತಿಯಿಂದ ಭದ್ರತಾ ವ್ಯವಸ್ಥೆ ಕಲ್ಪಿಸಲಾಗಿದೆ. ಇದರೊಂದಿಗೆ ಉಡುಪಿ ಜಿಲ್ಲಾ ಪೊಲೀಸರಿಂದಲೂ ಸ್ಥಳೀಯವಾಗಿ ಬಿಗಿ ಭದ್ರತೆ ಒದಗಿಸಲಾಗಿದೆ. ವಿಶೇಷವೆಂದರೆ, ಎಸ್ಕಾರ್ಟ್ ವ್ಯವಸ್ಥೆಗೆ ತಗಲುವ ಸಂಪೂರ್ಣ ವೆಚ್ಚವನ್ನು ರವಿ ಪೂಜಾರಿಯೇ ಭರಿಸಬೇಕು ಎಂದು ನ್ಯಾಯಾಲಯ ತನ್ನ ಆದೇಶದಲ್ಲಿ ಸ್ಪಷ್ಟಪಡಿಸಿದೆ.

error: Content is protected !!