ಮಂಗಳೂರು: ರಸ್ತೆಬದಿ ನಿಂತಿದ್ದ ಮಹಿಳೆಯ ಕತ್ತಿನಿಂದ ₹1.50 ಲಕ್ಷ ಮೌಲ್ಯದ ಚಿನ್ನದ ಸರ ಕಳ್ಳತನ
ಮಂಗಳೂರು: ಮಂಗಳಾದೇವಿ ದೇವಸ್ಥಾನದ ಸಮೀಪ ರಸ್ತೆ ದಾಟಲು ಡಿವೈಡರ್ ಬಳಿ ನಿಂತಿದ್ದ ಮಹಿಳೆಯೊಬ್ಬರ ಕುತ್ತಿಗೆಗೆ ಕೈಹಾಕಿ, ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ಬರೋಬ್ಬರಿ ₹1.50 ಲಕ್ಷ ಮೌಲ್ಯದ ಚಿನ್ನದ ಕರಿಮಣಿ ಸರವನ್ನು ಕಿತ್ತುಕೊಂಡು ಪರಾರಿಯಾಗಿರುವ ಘಟನೆ ನಡೆದಿದೆ. ಜಪ್ಪು ಸುಜಾತಾ ಸಿ. ಪಾಟೀಲ್ ಅವರು ಪಾಂಡೇಶ್ವರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಸುಜಾತಾ ಅವರ ಪತಿಯ ಆರೋಗ್ಯ ಸರಿಯಿಲ್ಲದ ಕಾರಣ, ಅವರು ಪ್ರತಿದಿನ ಸಂಜೆ ಮಂಗಳಾದೇವಿ ದೇವಸ್ಥಾನದ ಬಳಿ ಇರುವ ಜ್ಯೂಸ್ ಅಂಗಡಿಗೆ ಬಂದು ಜ್ಯೂಸ್ ತೆಗೆದುಕೊಂಡು ಹೋಗುತ್ತಿದ್ದರು. ಎಂದಿನಂತೆ ನವೆಂಬರ್ 11ರಂದು ಸಂಜೆ 7.55ರ ಸುಮಾರಿಗೆ ಮನೆಯಿಂದ ನಡೆದುಕೊಂಡು ಜ್ಯೂಸ್ ಅಂಗಡಿಗೆ ಬಂದಿದ್ದ ಅವರು, ಪಪ್ಪಾಯ ಜ್ಯೂಸ್ ಪಡೆದುಕೊಂಡು ವಾಪಸ್ ತೆರಳಲು ಅಂಗಡಿಯ ಎದುರುಬದಿ ರಸ್ತೆ ದಾಟಲು ಡಿವೈಡರ್ ಮಧ್ಯೆ ನಿಂತಿದ್ದರು.
ರಾತ್ರಿ ಸುಮಾರು 8.35ರ ಸಮಯಕ್ಕೆ ಪಾಂಡೇಶ್ವರ ರಸ್ತೆ ಕಡೆಯಿಂದ ಬೈಕ್‌ನಲ್ಲಿ ಬಂದಿಳಿದ ಇಬ್ಬರು ಅಪರಿಚಿತ ವ್ಯಕ್ತಿಗಳು ಸುಜಾತಾ ಅವರ ಹತ್ತಿರ ಬಂದಿದ್ದಾರೆ. ಈ ವೇಳೆ ಬೈಕ್‌ನ ಹಿಂಬದಿಯಲ್ಲಿ ಕುಳಿತಿದ್ದ ವ್ಯಕ್ತಿ ಏಕಾಏಕಿ ಸುಜಾತಾ ಅವರ ಕುತ್ತಿಗೆಗೆ ಕೈಹಾಕಿ, ಕುತ್ತಿಗೆಯಲ್ಲಿದ್ದ ತಾಳಿ ಸಮೇತ 15 ಗ್ರಾಂ ತೂಕದ ಚಿನ್ನದ ಕರಿಮಣಿ ಸರವನ್ನು ಬಲವಂತವಾಗಿ ಕಿತ್ತುಕೊಂಡಿದ್ದಾನೆ. ಮಹಿಳೆ ಜೋರಾಗಿ ಬೊಬ್ಬೆ ಹಾಕುವಷ್ಟರಲ್ಲಿ, ಬೈಕ್‌ನಲ್ಲಿದ್ದ ಇಬ್ಬರು ವ್ಯಕ್ತಿಗಳು ಮಂಗಳಾದೇವಿ ರಸ್ತೆಯ ಕಡೆಯೇ ಬೈಕ್ ಚಲಾಯಿಸಿಕೊಂಡು ಪರಾರಿಯಾಗಿದ್ದಾರೆ. ಬೈಕ್ ಚಲಾಯಿಸುತ್ತಿದ್ದ ವ್ಯಕ್ತಿ ಮುಖಕ್ಕೆ ಮಾಸ್ಕ್ ಧರಿಸಿದ್ದರೆ, ಹಿಂಬದಿಯಲ್ಲಿ ಕುಳಿತಿದ್ದ ಕಪ್ಪು ಬಣ್ಣದ ಶರ್ಟ್ ಧರಿಸಿದ್ದ ವ್ಯಕ್ತಿ ಸರ ಕಳವು ಮಾಡಿದ್ದಾನೆ. ಇಬ್ಬರೂ ಸವಾರರು ಹೆಲ್ಮೆಟ್ ಧರಿಸಿರಲಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ.




