November 13, 2026

ಸೌಜನ್ಯಾ ಪ್ರಕರಣದ ಎಸ್‌ಐಟಿ ತನಿಖೆ: ವಿಚಾರಣೆಗೆ ಹಾಜರಾದ ವೈದ್ಯ ಡಾ. ಮಹಾಬಲ ಶೆಟ್ಟಿ

2a583cd7-91f1-488f-ad6a-be00fd178751

ಮಂಗಳೂರು: ಧರ್ಮಸ್ಥಳದ ಸೌಜನ್ಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ವಿಶೇಷ ತನಿಖಾ ತಂಡದ (SIT) ತನಿಖೆ ಚುರುಕುಗೊಂಡಿದ್ದು, ಸೌಜನ್ಯಾ ಅವರ ತಾಯಿ ಕುಸುಮಾವತಿ ಅವರು ಗುರುವಾರ ಮಂಗಳೂರಿನ ಎಸ್‌ಐಟಿ ಕಚೇರಿಗೆ ಆಗಮಿಸಿ ವಿಚಾರಣೆಗೆ ಹಾಜರಾದರು. ವಿಚಾರಣೆಗೆ ಹಾಜರಾಗುವಂತೆ ಎಸ್‌ಐಟಿ ಅಧಿಕಾರಿಗಳು ಕುಸುಮಾವತಿ ಅವರಿಗೆ ನೋಟಿಸ್ ಜಾರಿ ಮಾಡಿದ್ದರು.

ಈ ಹಿನ್ನೆಲೆಯಲ್ಲಿ ಅವರು ಪೊಲೀಸ್ ಜೀಪಿನಲ್ಲಿ ಮಂಗಳೂರಿನ ಎಸ್‌ಐಟಿ ಕಚೇರಿಗೆ ಆಗಮಿಸಿದ್ದು, ಪ್ರಕರಣದ ಮರುತನಿಖೆಯ ಭಾಗವಾಗಿ ಅಧಿಕಾರಿಗಳು ಅವರಿಂದ ಹೇಳಿಕೆ ದಾಖಲಿಸಿಕೊಂಡಿದ್ದಾರೆ.

ಇದೇ ವೇಳೆ, ಪ್ರಕರಣದಲ್ಲಿ ಆರೋಪಿಯಾಗಿದ್ದ ಸಂತೋಷ್ ರಾವ್‌ ಅವರ ವೈದ್ಯಕೀಯ ತಪಾಸಣೆ ನಡೆಸಿದ್ದ ಡಾ. ಮಹಾಬಲ ಶೆಟ್ಟಿ ಅವರನ್ನೂ ಎಸ್‌ಐಟಿ ಅಧಿಕಾರಿಗಳು ಸುಮಾರು ನಾಲ್ಕು ಗಂಟೆಗಳ ಕಾಲ ವಿಚಾರಣೆಗೆ ಒಳಪಡಿಸಿದ್ದಾರೆ. ವಿಚಾರಣೆ ಮುಗಿಸಿ ಹೊರಬಂದ ಡಾ. ಮಹಾಬಲ ಶೆಟ್ಟಿ ಅವರು ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದರು. “ನಾನೇನೂ ಮಾತನಾಡುವುದಿಲ್ಲ, ಏನೇ ಪ್ರಶ್ನೆಗಳಿದ್ದರೂ ನೀವು ಎಸ್‌ಐಟಿ ಅಧಿಕಾರಿಗಳನ್ನೇ ಕೇಳಿ” ಎಂದರು. ಸಂತೋಷ್ ರಾವ್ ಕುರಿತು ಮಾಧ್ಯಮದವರು ಪ್ರಶ್ನಿಸಿದಾಗ, “ಅದು ನ್ಯಾಯಾಲಯದಲ್ಲಿ ಈಗಾಗಲೇ ಮುಗಿದಿರುವ ವಿಚಾರ. ಮತ್ತೆ ನೀವು ಸಂತೋಷ್ ರಾವ್ ಹೆಸರನ್ನು ಯಾಕೆ ಎಳೆಯುತ್ತಿದ್ದೀರಿ?” ಎಂದು ಪ್ರತಿಕ್ರಿಯಿಸಿ ಅಲ್ಲಿಂದ ತೆರಳಿದರು.

error: Content is protected !!