ಪುತ್ತೂರು: ತೆಂಗಿನಕಾಯಿ ಸಾಗಾಟದ ಪಿಕಪ್ ಪಲ್ಟಿ: ಚಾಲಕ ಮೃತ್ಯು
ಪುತ್ತೂರು: ಪುತ್ತೂರು-ಉಪ್ಪಿನಂಗಡಿ ರಸ್ತೆಯ ಕೋಡಿಂಬಾಡಿ ಗ್ರಾಮದ ಅರ್ಬಿಯಲ್ಲಿ ತೆಂಗಿನಕಾಯಿ ಸಾಗಾಟದ ಪಿಕಪ್ ಪಲ್ಟಿಯಾಗಿ ಚಾಲಕ ಮೃತಪಟ್ಟ ಘಟನೆ ಬುಧವಾರ ನಡೆದಿದೆ.
ಪಿಕಪ್ ಚಾಲಕ ಕಾಂಚನ ಮೂಲದ ಪ್ರಸ್ತುತ ಬನ್ನೂರಿನಲ್ಲಿ ನೆಲೆಸಿದ್ದ ಶಿವಪ್ರಸಾದ್ (50) ಮೃತರು.
ಅವರು ಉಪ್ಪಿನಂಗಡಿಯಲ್ಲಿ ಪಾಲುದಾರಿಕೆಯಲ್ಲಿ ತೆಂಗಿನಕಾಯಿ ವ್ಯಾಪಾರದ ಉದ್ಯಮ ನಡೆಸುತ್ತಿದ್ದು, ಬುಧವಾರ ಉಪ್ಪಿನಂಗಡಿಯಿಂದ ಸೇಡಿಯಾಪಿನ ಫ್ಯಾಕ್ಟರಿಗೆ ತೆಂಗಿನಕಾಯಿ ತರುತ್ತಿದ್ದ ವೇಳೆ ಪಿಕಪ್ ವಾಹನ ಅವರ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಅವರು ಹೊರಗೆ ಎಸೆಯಲ್ಪಟ್ಟು ವಾಹನ ಅವರ ಮೇಲೆ ಬಿದ್ದಿದೆ ಎನ್ನಲಾಗಿದೆ.
ವಾಹನ ಪಲ್ಟಿಯಾದ ಸಂದರ್ಭ ಅದರಲ್ಲಿದ್ದ ತೆಂಗಿನಕಾಯಿಗಳು ಚೆಲ್ಲಾಪಿಲ್ಲಿಯಾಗಿ ರಸ್ತೆಗೆ ಬಿದ್ದಿದ್ದವು. ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಪುತ್ತೂರು ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




