ಮಂಗಳೂರು: ಅಪಘಾತದಿಂದ ಮಿದುಳು ನಿಷ್ಕ್ರಿಯಗೊಂಡ ಯುವಕನ ಅಂಗಾಂಗ ದಾನ
ಮಂಗಳೂರು: ಕುತ್ತಾರುವಿನ ಕೊರಗಜ್ಜನ ಆದಿಕ್ಷೇತ್ರದ ಕಟ್ಟೆಯ ಬಳಿ ಸೋಮವಾರ ರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ತೀವ್ರ ಗಾಯಗೊಂಡು ಮಿದುಳು ನಿಷ್ಕ್ರಿಯಗೊಂಡಿದ್ದ ಯುವಕನ ಅಂಗಾಂಗಗಳನ್ನು ದಾನ ಮಾಡಲು ಅವರ ಪೋಷಕರು ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ. ಕುತ್ತಾರುವಿನ ಆಯೆರೆಬೆಟ್ಟು ನಿವಾಸಿ ಗೋಪಾಲ ಹಾಗೂ ವೇದಾವತಿ ದಂಪತಿಯ ಕಿರಿಯ ಪುತ್ರ ವರ್ಷಿತ್ ಕುಲಾಲ್ (21) ಮಿದುಳು ನಿಷ್ಕ್ರಿಯಗೊಂಡ ದುರ್ದೈವಿ. ಫ್ಯಾಬ್ರಿಕೇಷನ್ ಕೆಲಸ ಮಾಡಿಕೊಂಡಿದ್ದ ವರ್ಷಿತ್ ಅವಿವಾಹಿತರಾಗಿದ್ದು, ತಂದೆ, ತಾಯಿ ಹಾಗೂ ಒಬ್ಬ ಸಹೋದರನನ್ನು ಅಗಲಿದ್ದಾರೆ.
ಸೋಮವಾರ ರಾತ್ರಿ ಸುಮಾರು 7:30 ರ ವೇಳೆಗೆ ವರ್ಷಿತ್ ಕುಲಾಲ್ ಅವರು ಬೈಕಿನಲ್ಲಿ ಮನೆಗೆ ತೆರಳುತ್ತಿದ್ದರು. ಈ ವೇಳೆ ಕುತ್ತಾರುವಿನ ಕೊರಗಜ್ಜನ ಆದಿ ಕ್ಷೇತ್ರದ ಬಳಿ ರಾಣಿಪುರದಿಂದ ಕುತ್ತಾರುವಿನತ್ತ ವೇಗವಾಗಿ ಧಾವಿಸುತ್ತಿದ್ದ ಸ್ಕೂಟರ್ ಹಾಗೂ ವರ್ಷಿತ್ ಅವರ ಬೈಕ್ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿತ್ತು. ಢಿಕ್ಕಿಯ ಭೀಕರ ರಭಸಕ್ಕೆ ವರ್ಷಿತ್ ರಸ್ತೆಗೆ ಎಸೆಯಲ್ಪಟ್ಟಿದ್ದು, ಅವರ ತಲೆಗೆ ಗಂಭೀರ ಸ್ವರೂಪದ ಗಾಯವಾಗಿತ್ತು. ತಕ್ಷಣವೇ ಅವರನ್ನು ದೇರಳಕಟ್ಟೆಯ ಯೆನೆಪೋಯ ಆಸ್ಪತ್ರೆಗೆ ದಾಖಲಿಸಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಯಿತಾದರೂ, ಚಿಕಿತ್ಸೆಗೆ ಸ್ಪಂದಿಸದೆ ಅವರ ಮಿದುಳು ನಿಷ್ಕ್ರಿಯಗೊಂಡಿದೆ ಎಂದು ವೈದ್ಯರು ಸ್ಪಷ್ಟಪಡಿಸಿದರು.





