“AI ಮತ್ತು ಶಿಕ್ಷಕ : ಸ್ಪರ್ಧಿಯಲ್ಲ, ಒಡನಾಡಿ”*ಶಿಕ್ಷಕರ ದಿನಾಚರಣೆಯ ಹಾರ್ದಿಕ ಶುಭಾಶಯಗಳುಬರಹ: ಸಫ್ವಾನ್ ಪಿಲಿಕಲ್*ತಂತ್ರಜ್ಞಾನ ಬದಲಾಗುತ್ತಿದೆ, ಶಿಕ್ಷಕರ ಪಾತ್ರವೂ ಬದಲಾಗುತ್ತಿದೆ
ಆಧುನಿಕ ಜಗತ್ತು ಪ್ರಸ್ತುತ ಎಐ (AI) ಎಂಬ ತಾಂತ್ರಿಕ ಲೋಕದೊಳಗೆ ಬಂಧಿಯಾಗಿದೆ. ಈ ಎಐ ವಿಶ್ವದ ಉದ್ದಗಲಕ್ಕೂ ಎಲ್ಲಾ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದು, ಶಿಕ್ಷಣವು ಇದರಿಂದ ಹೊರತಾಗಿಲ್ಲ. ಶಿಕ್ಷಣ ಕ್ಷೇತ್ರವೂ ತಂತ್ರಜ್ಞಾನದ ವೇಗದ ಬದಲಾವಣೆಯನ್ನು ಎದುರಿಸುತ್ತಿದೆ. ಕೃತಕ ಬುದ್ಧಿಮತ್ತೆ (AI) ತರಗತಿಯೊಳಗೆ ಪ್ರವೇಶಿಸಿರುವ ಈ ಸಂದರ್ಭದಲ್ಲಿ, ಶಿಕ್ಷಕರ ಉದ್ಯೋಗ ಭಧ್ರತೆ ಮತ್ತು ಶಿಕ್ಷಕರ ಪಾತ್ರದ ಕುರಿತು ಹೊಸ ವಿಮರ್ಷೆ, ಚರ್ಚೆ ಆರಂಭವಾಗಿದೆ.
AI ಶಿಕ್ಷಕರ ಸ್ಥಾನವನ್ನು ಪಡೆದುಕೊಳ್ಳುತ್ತದೆಯೇ ಎಂಬ ಪ್ರಶ್ನೆ ಸಹಜ. ಆದರೆ ವಾಸ್ತವದಲ್ಲಿ AI ಶಿಕ್ಷಕರಿಗೆ ಪರ್ಯಾಯವಾಗುವುದಕ್ಕಿಂತ ಒಬ್ಬ ಉತ್ತಮ ಸಹಾಯಕನಾಗುವ ಸಾಧ್ಯತೆಯೇ ಹೆಚ್ಚು.
ಕಲಿಕಾ ವಿಷಯಗಳನ್ನು ತಯಾರಿಸುವುದು, ಕಲಿಕಾ ಸಾಮಗ್ರಿಗಳನ್ನು ರೂಪಿಸುವುದು, ಪ್ರಶ್ನೆಗಳನ್ನು ತಯಾರಿಸುವುದು ಹಾಗೂ ವಿದ್ಯಾರ್ಥಿಗಳ ಕಲಿಕೆಯ ಅಗತ್ಯಗಳನ್ನು ಗುರುತಿಸುವುದು ಮುಂತಾದ ಹಲವು ಕೆಲಸಗಳಲ್ಲಿ AI ಶಿಕ್ಷಕರಿಗೆ ನೆರವಾಗಬಹುದು. ಇದರಿಂದ ಶಿಕ್ಷಕರು ವಿದ್ಯಾರ್ಥಿಗಳೊಂದಿಗೆ ಹೆಚ್ಚು ಸಮಯ ಕಳೆಯಲು ಮತ್ತು ಅವರ ವೈಯಕ್ತಿಕ ಅಗತ್ಯಗಳತ್ತ ಗಮನಹರಿಸಲು ಸಾಧ್ಯವಾಗುತ್ತದೆ.
ಆದರೆ ಶಿಕ್ಷಣವೆಂದರೆ ಕೇವಲ ಜ್ಞಾನ, ಮಾಹಿತಿಯನ್ನು ನೀಡುವುದಲ್ಲ. ವಿದ್ಯಾರ್ಥಿಯ ಮನಸ್ಥಿತಿಯನ್ನು ಅರ್ಥಮಾಡಿಕೊಳ್ಳುವುದು, ತಪ್ಪು ಮಾಡಿದಾಗ ಧೈರ್ಯ ತುಂಬುವುದು, ಉತ್ತಮ ಮೌಲ್ಯಗಳನ್ನು ಬೆಳೆಸುವುದು ಮತ್ತು ಜೀವನದ ಸವಾಲುಗಳನ್ನು ಎದುರಿಸಲು ಸಿದ್ಧಗೊಳಿಸುವುದು ಶಿಕ್ಷಕರ ಮಾನವೀಯ ಜವಾಬ್ದಾರಿ.
ಆದ್ದರಿಂದ 21ನೇ ಶತಮಾನದ ಶಿಕ್ಷಕರು AI ಅನ್ನು ಹೆದರದೆ, ಅದರ ಸಾಮರ್ಥ್ಯವನ್ನು ಅರ್ಥಮಾಡಿಕೊಂಡು, ಮಾನವೀಯ ಸ್ಪರ್ಶದೊಂದಿಗೆ ತಂತ್ರಜ್ಞಾನವನ್ನು ಬಳಸುವ ಶಿಕ್ಷಕರಾಗಬೇಕು. AI ಉತ್ತರ ನೀಡಬಹುದು, ಆದರೆ ವಿದ್ಯಾರ್ಥಿಗಳಿಗೆ ಸರಿಯಾದ ಪ್ರಶ್ನೆ ಕೇಳಲು ಕಲಿಸುವವರು ಶಿಕ್ಷಕರು. AI ಜ್ಞಾನ ನೀಡಬಹುದು, ಆದರೆ ಆ ಜ್ಞಾನವನ್ನು ಜೀವನದ ಮೌಲ್ಯವಾಗಿ ರೂಪಿಸಬೇಕಾದವರು ಶಿಕ್ಷಕರು.
AI ನಮ್ಮ ಉದ್ಯೋಗವನ್ನು ಕಸಿಯಲಿದೆ ಎಂದು ಮಾತ್ರ ಆ ನಿರ್ಜೀವ ತಂತ್ರಜ್ಞಾನವನ್ನು ದೂರುತ್ತಾ ಕೂರದೆ, ಅದನ್ನು ಕಲಿತು, ಬಳಸುತ್ತಾ ವೃತ್ತಿ ಜೀವನದಲ್ಲಿ ಅಳವಡಿಸಿಕೊಂಡು ಮುಂದುವರಿದರೆ ಶಿಕ್ಷಕರ ಜೀವನ ಶೈಲಿಯು ಉತ್ತಮವಾಗುವುದರಲ್ಲಿ ಸಂಶಯವಿಲ್ಲ.
ಈ ಶಿಕ್ಷಕರ ದಿನಾಚರಣೆ 2026ರಲ್ಲಿ, ತಂತ್ರಜ್ಞಾನವನ್ನು ಅಪ್ಪಿಕೊಂಡು ಮಾನವೀಯತೆಯನ್ನು ಉಳಿಸಿಕೊಂಡು ಮುಂದಿನ ಪೀಳಿಗೆಯನ್ನು ರೂಪಿಸುತ್ತಿರುವ ಪ್ರತಿಯೊಬ್ಬ ಶಿಕ್ಷಕರಿಗೂ ಹೃತ್ಪೂರ್ವಕ ನಮನಗಳು.
ಸಫ್ವಾನ್ ಪಿಲಿಕಲ್
ಆಡಳಿತಾಧಿಕಾರಿ
ಜನಪ್ರಿಯ ಸೆಂಟ್ರಲ್ ಸ್ಕೂಲ್, ಕಂಬಳಬೆಟ್ಟು, ವಿಟ್ಲ.





