ನೇಪಾಳ ಪ್ರವಾಹ: ಮೃತರ ಸಂಖ್ಯೆ 469ಕ್ಕೆ ಏರಿಕೆ, 1,498 ಮಂದಿ ನಾಪತ್ತೆ
ನೇಪಾಳ: ನೇಪಾಳ-ಟಿಬೆಟ್ ಗಡಿ ಪ್ರದೇಶದಲ್ಲಿ ಭೀಕರ ಪ್ರವಾಹ ಮತ್ತು ಭೂಕುಸಿತದಲ್ಲಿ ಮೃತರ ಸಂಖ್ಯೆ 469ಕ್ಕೆ ಏರಿಕೆಯಾಗಿದೆ. ಗಡಿಭಾಗದ ಎರಡೂ ಕಡೆಗಳಲ್ಲಿ ಒಟ್ಟು 1,498 ಮಂದಿ ನಾಪತ್ತೆಯಾಗಿದ್ದಾರೆ.
ಮನೆಗಳು, ವಾಹನಗಳು, ರಸ್ತೆಗಳು ಮತ್ತು ಸೇತುವೆಗಳು ಪ್ರವಾಹದ ರಭಸಕ್ಕೆ ಕೊಚ್ಚಿಹೋಗಿವೆ. ಅತ್ಯಂತ ಹಾನಿಗೊಳಗಾದ ಪ್ರದೇಶಗಳಲ್ಲಿ ರಕ್ಷಣಾ ಕಾರ್ಯಾಚರಣೆ ಮುಂದುವರಿದಿರುವುದರಿಂದ ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆಯಿದೆ. 290 ಭಾರತೀಯರ ಸಂಪರ್ಕ ಇನ್ನೂ ಸಾಧ್ಯವಾಗಿಲ್ಲ.
ಭೋಟೆ ಕೋಶಿ-ತ್ರಿಶೂಲಿ ಕಾರಿಡಾರ್ ನಲ್ಲಿ ನೂರಾರು ಮಂದಿ ಪ್ರವಾಹದ ನೀರು ಮತ್ತು ಬಂಡೆಗಳ ರಭಸಕ್ಕೆ ಕೊಚ್ಚಿಹೋಗಿದ್ದಾರೆ ಅಥವಾ ಸಂಪರ್ಕ ಕಡಿತಗೊಂಡ ಪ್ರದೇಶಗಳಲ್ಲಿ ಸಿಲುಕಿಕೊಂಡಿದ್ದಾರೆ. ನಾಪತ್ತೆಯಾದವರಿಗಾಗಿ ರಕ್ಷಣಾ ಪಡೆಗಳು ಶೋಧ ಕಾರ್ಯ ಮುಂದುವರಿಸಿವೆ. ಕೆಲವೇ ಗಂಟೆಗಳಲ್ಲಿ ಪ್ರವಾಹದ ನೀರು ಮತ್ತು ಬಂಡೆಗಳು ಸುಮಾರು 200 ಕಿ.ಮೀ. ವ್ಯಾಪ್ತಿಯಲ್ಲಿ ಭಾರಿ ಹಾನಿ ಉಂಟುಮಾಡಿವೆ.
ಪ್ರವಾಹದಿಂದಾಗಿ ಹಲವು ಗ್ರಾಮಗಳು ಸಂಪರ್ಕ ಕಡಿತಗೊಂಡಿವೆ. ರಸ್ತೆಗಳು ಮತ್ತು ಸೇತುವೆಗಳು ಕೊಚ್ಚಿಹೋಗಿರುವುದರಿಂದ ರಕ್ಷಣಾ ಕಾರ್ಯಾಚರಣೆಗೆ ತೊಡಕು ಎದುರಾಗಿದೆ. ಮನೆಗಳು, ಮಾರುಕಟ್ಟೆಗಳು, ಕೃಷಿ ಭೂಮಿಗಳು ಮತ್ತು ಸರಕಾರಿ ಕಟ್ಟಡಗಳು ಮಣ್ಣು ಹಾಗೂ ಅವಶೇಷಗಳಡಿ ಕಣ್ಮರೆಯಾಗಿವೆ.
ನೇಪಾಳ ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ, 50 ವಿದೇಶಿಯರು ಸೇರಿದಂತೆ 796 ಮಂದಿಯನ್ನು ಹೆಲಿಕಾಪ್ಟರ್‌ಗಳ ಮೂಲಕ ಪ್ರವಾಹ ಪೀಡಿತ ಪ್ರದೇಶಗಳಿಂದ ರಕ್ಷಿಸಲಾಗಿದೆ.





