August 27, 2026

ನೇಪಾಳದಲ್ಲಿ ಭೀಕರ ಪ್ರವಾಹ: ಮೃತರ ಸಂಖ್ಯೆ160 ಕ್ಕೆ ಏರಿಕೆ, ಹಲವರು ನಾಪತ್ತೆ

0
IMG-20260827-WA0008

ನೇಪಾಳ: ನೇಪಾಳ-ಟಿಬೆಟ್ ಗಡಿ ಭಾಗದ ಭೋಟೆ ಕೋಶಿ ಮತ್ತು ತ್ರಿಶೂಲಿ ನದಿಗಳಲ್ಲಿ ಬುಧವಾರ ಸಂಭವಿಸಿದ ಹಠಾತ್ ಪ್ರವಾಹ ಹಾಗೂ ಭೂಕುಸಿತದಿಂದಾಗಿ ನೀರಿನ ಮಟ್ಟ ಸುಮಾರು 30 ಅಡಿಗಳಷ್ಟು ಏರಿಕೆಯಾಗಿದೆ. ಘಟನೆಯಲ್ಲಿ ಕನಿಷ್ಠ 160 ಮಂದಿ ಮೃತಪಟ್ಟಿದ್ದು, ಭಾರತದ ಕೈಲಾಸ ಮಾನಸ ಸರೋವರ ಯಾತ್ರಿಕರು ಸೇರಿದಂತೆ ನೂರಾರು ಮಂದಿ ನಾಪತ್ತೆಯಾಗಿದ್ದಾರೆ.

ಪ್ರವಾಹದ ರಭಸಕ್ಕೆ ವಸತಿ ಪ್ರದೇಶಗಳು, ಜಲವಿದ್ಯುತ್ ಘಟಕಗಳು ಹಾಗೂ ಯಾತ್ರಾ ಮಾರ್ಗಗಳು ಕೊಚ್ಚಿಹೋಗಿವೆ.

ನೇಪಾಳ ಪೊಲೀಸರು ಮೃತರ ಸಂಖ್ಯೆ 157 ಎಂದು ವರದಿ ಮಾಡಿದ್ದಾರೆ. ಚೀನಾ ಅಧಿಕಾರಿಗಳ ವರದಿ ಪ್ರಕಾರ, ಟಿಬೆಟ್ ನ ಗೈರಾಂಗ್ ಕೌಂಟಿಯಲ್ಲಿ 3 ಮಂದಿ ಮೃತಪಟ್ಟಿದ್ದು, 265 ಮಂದಿ ನಾಪತ್ತೆಯಾಗಿದ್ದಾರೆ. ಹೀಗಾಗಿ, ಲಭ್ಯವಿರುವ ಅಧಿಕೃತ ಮಾಹಿತಿಯ ಪ್ರಕಾರ ಒಟ್ಟು 160 ಮಂದಿ ಮೃತಪಟ್ಟಿದ್ದಾರೆ.

ನೇಪಾಳ ಪೊಲೀಸರ ಪ್ರಕಾರ, 466 ವಿದೇಶಿಯರು ಹಾಗೂ 113 ಸ್ಥಳೀಯರು ಸೇರಿ ಒಟ್ಟು 579 ಮಂದಿ ನಾಪತ್ತೆಯಾಗಿದ್ದಾರೆ. ನಾಪತ್ತೆಯಾದವರಲ್ಲಿ 133 ಭಾರತೀಯರು ಮತ್ತು 37 ಅನಿವಾಸಿ ಭಾರತೀಯರು (NRI) ಸೇರಿದ್ದಾರೆ.

ನಾಪತ್ತೆಯಾದ ವಿದೇಶಿಯರಲ್ಲಿ 54 ಅಮೆರಿಕನ್ನರು, 34 ಆಸ್ಟ್ರೇಲಿಯನ್ನರು, 33 ಬ್ರಿಟಿಷರು, 24 ಕೆನಡಿಯನ್ನರು, 19 ಮಲೇಷಿಯನ್ನರು ಹಾಗೂ 8 ಕೊರಿಯನ್ನರು ಸೇರಿದ್ದಾರೆ ಎಂದು ವರದಿಯಾಗಿದೆ. ಇವರಲ್ಲಿ ಹೆಚ್ಚಿನವರು ಕೈಲಾಸ ಮಾನಸ ಸರೋವರ ಯಾತ್ರಿಕರಾಗಿದ್ದು, ಭಾರತೀಯರೂ ಸೇರಿದಂತೆ ಸುಮಾರು 400 ಮಂದಿ ನೇಪಾಳ-ಟಿಬೆಟ್ ಗಡಿ ದಾಟಲು ಸಿದ್ಧತೆ ನಡೆಸುತ್ತಿದ್ದ ವೇಳೆ ಪ್ರವಾಹಕ್ಕೆ ಸಿಲುಕಿದ್ದಾರೆ.

ರಸುವಾದಲ್ಲಿ ಪ್ರವಾಹಕ್ಕೆ ಬ್ಯಾರಕ್ ಗಳು ಕೊಚ್ಚಿಹೋದ ಪರಿಣಾಮ 29 ಪೊಲೀಸ್ ಸಿಬ್ಬಂದಿ ಹಾಗೂ 44 ಯೋಧರು ನಾಪತ್ತೆಯಾಗಿದ್ದಾರೆ ಎಂದು ನೇಪಾಳದ ವಿದೇಶಾಂಗ ಸಚಿವ ಶಿಶಿರ್ ಖನಾಲ್ ಮಾಹಿತಿ ನೀಡಿದ್ದಾರೆ. ಇದರೊಂದಿಗೆ ಗಡಿ ಭಾಗದಲ್ಲಿ ಕರ್ತವ್ಯದಲ್ಲಿದ್ದ ಕಸ್ಟಮ್ಸ್ ಅಧಿಕಾರಿಗಳು ಹಾಗೂ ಜಲವಿದ್ಯುತ್ ಯೋಜನೆಯ ನೌಕರರೂ ಪ್ರವಾಹದಲ್ಲಿ ಸಿಲುಕಿದ್ದಾರೆ.

Leave a Reply

Your email address will not be published. Required fields are marked *

error: Content is protected !!