August 24, 2026

ಮುದರಂಗಡಿ ಡೇವಿಡ್ ಡಿಸೋಜ ಶೂಟೌಟ್ ಪ್ರಕರಣ: ತಪ್ಪಿಸಲು ಯತ್ನಿಸಿದ ಆರೋಪಿ ಕಾಲಿಗೆ ಗುಂಡೇಟು

0
IMG-20260824-WA0025

ಉಡುಪಿ: ಮುದರಂಗಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ, ಗುತ್ತಿಗೆದಾರ ಡೇವಿಡ್ ಡಿಸೋಜ ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿ ವಶಕ್ಕೆ ಪಡೆದು ಉಡುಪಿಗೆ ಕರೆ ತರುತ್ತಿದ್ದ ಆರೋಪಿಯೋರ್ವ ತಪ್ಪಿಸಲು ಯತ್ನಿಸಿದ್ದು, ಈ ವೇಳೆ ಪೊಲೀಸರು ಆತನ ಕಾಲಿಗೆ ಗುಂಡುಹಾರಿಸಿ ಬಂಧಿಸಿರುವ ಬಗ್ಗೆ ವರದಿಯಾಗಿದೆ.

ಆರೋಪಿಯನ್ನು ಮುಂಬೈನ ನಟೋರಿಯಸ್ ಗ್ಯಾಂಗ್‌ಸ್ಟರ್, ಬಿಹಾರ ರಾಜ್ಯದ ನಳಂದ ನಿವಾಸಿ ಅನುಜ್ ಪಾಟೀಲ್(35) ಎಂದು ಗುರುತಿಸಲಾಗಿದೆ. ಈತ ಡೇವಿಡ್ ಕೊಲೆ ಪ್ರಕರಣದಲ್ಲಿ ನೇರವಾಗಿ‌ ಭಾಗಿಯಾಗಿರುವ ರಾಜು ಸಹಿತ ಮೂವರು ಶೂಟರ್‌ಗಳನ್ನು ಕಳುಹಿಸಿದ ಆರೋಪಿಯಾಗಿದ್ದಾನೆ.

ಈ ಪ್ರಕರಣದ ತನಿಖೆ ಸಂಬಂಧ ಕುಂದಾಪುರ ಠಾಣೆಯ ಪೊಲೀಸ್ ಉಪನಿರೀಕ್ಷಕ ನಂಜ ನಾಯಕ್ ಮತ್ತು ಕೊಲ್ಲೂರು ಠಾಣೆಯ ಪೊಲೀಸ್ ಉಪನಿರೀಕ್ಷಕ ವಿನಯ್ ಮತ್ತು ತಂಡ ಇಂದು ಬೆಳಿಗ್ಗೆ 6.30ರ ವೇಳೆಗೆ ಹೆಬ್ರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅನುಜ್ ಪಾಟೀಲ್‌ನನ್ನು ಬಂಧಿಸಿದ್ದರು.

ಆರೋಪಿಯನ್ನು ಉಡುಪಿಗೆ ಕರೆದುಕೊಂಡು ಬರುವಾಗ ಆತ ಪೊಲೀಸ್ ಸಿಬ್ಬಂದಿಯವರ ಮೇಲೆ ಹಲ್ಲೆ ನಡೆಸಿ, ಕೊಲ್ಲೂರು ಠಾಣೆ ಎಸ್ಸೈ ವಿನಯ್ ರವರ ಆಯುಧವನ್ನು ಕಸಿದು, ಫೈಯರ್ ಮಾಡಿದನು. ಈ ವೇಳೆ ಕುಂದಾಪುರ ಪೊಲೀಸ್ ಉಪನಿರೀಕ್ಷಕ ನಂಜ ನಾಯ್ಕ್ ಆತ್ಮ ರಕ್ಷಣೆಗಾಗಿ ಆರೋಪಿಯ ಕಾಲಿಗೆ ಫೈಯರ್ ಮಾಡಿದರು. ಇದರಿಂದ ತೀವ್ರವಾಗಿ ಗಾಯಗೊಂಡಿರುವ ಆರೋಪಿಯನ್ನು ಚಿಕಿತ್ಸೆಗಾಗಿ ಉಡುಪಿಯ ಅಜ್ಜರಕಾಡು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!