ತ್ವೈಬಾ ಈಶ್ವರಮಂಗಲ: ಆಗಸ್ಟ್ 22ರಿಂದ 24ರವರೆಗೆ ವೈಭವದ ‘RIBAT’ ಮಿಲಾದ್ ಫೆಸ್ಟ್
ಈಶ್ವರಮಂಗಲ: ಇಲ್ಲಿನ ಪ್ರಸಿದ್ಧ ಧಾರ್ಮಿಕ ಹಾಗೂ ಲೌಕಿಕ ಸಮನ್ವಯ ವಿದ್ಯಾಸಂಸ್ಥೆಯಾದ ‘ತ್ವೈಬಾ ಎಜುಕೇಶನ್ ಸೆಂಟರ್’ನ ವಿದ್ಯಾರ್ಥಿ ಒಕ್ಕೂಟ ‘ORBIT’ ಆಯೋಜಿಸುವ ಬಹುನಿರೀಕ್ಷಿತ ‘RIBAT’ ಮಿಲಾದ್ ಫೆಸ್ಟ್ ಆಗಸ್ಟ್ 22, 23 ಮತ್ತು 24ರಂದು ಅತ್ಯಂತ ವೈಭವಪೂರ್ಣವಾಗಿ ನಡೆಯಲಿದೆ.
ಮೂರು ದಿನಗಳ ಕಾಲ ನಡೆಯಲಿರುವ ಈ ಸುಜ್ಞಾನದ ಸಂಭ್ರಮದಲ್ಲಿ ಮೂರು ಪ್ರತ್ಯೇಕ ವಿಭಾಗಗಳಲ್ಲಿ 100ರಷ್ಟು ವಿಭಿನ್ನ ಹಾಗೂ ಸೃಜನಶೀಲ ಸ್ಪರ್ಧೆಗಳು ನಡೆಯಲಿದೆ. ವಿದ್ಯಾರ್ಥಿಗಳ ಸುಪ್ತ ಪ್ರತಿಭೆಯನ್ನು ಹೊರತರಲು ಈಗಾಗಲೇ ‘ಆಫ್ ಸ್ಟೇಜ್’ (Off-Stage) ಸ್ಪರ್ಧೆಗಳು ಯಶಸ್ವಿಯಾಗಿ ಪ್ರಾರಂಭಗೊಂಡಿದ್ದು, ರಂಗೇರಿದ ವೇದಿಕೆ ಸ್ಪರ್ಧೆಗಳು (On-Stage) ಆಗಸ್ಟ್ 22ರಿಂದ ಮೂರು ದಿನಗಳ ಕಾಲ ನೆರೆದವರ ಕಣ್ಣು-ಮನ ತಣಿಸಲಿವೆ.
ಆಗಸ್ಟ್ 22ರಂದು ನಡೆಯಲಿರುವ ಈ ವೈಭವದ ಕಾರ್ಯಕ್ರಮವನ್ನು ಕನ್ನಡ ಸಾಹಿತ್ಯ, ಪತ್ರಿಕೋದ್ಯಮ ಹಾಗೂ ಪರಿಸರ ಕ್ಷೇತ್ರದ ಚಿಂತಕ, ಹಿರಿಯ ಸಾಹಿತಿ ಡಾ. ನರೇಂದ್ರ ರೈ ದೇರ್ಲ ರವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.
ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಸಾಹಿತ್ಯ ಮತ್ತು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಡಾ. ನರೇಂದ್ರ ರೈರವರು ನಿವೃತ್ತ ಕನ್ನಡ ಪ್ರಾಧ್ಯಾಪಕರಾಗಿದ್ದು, ಹಂಪಿ ಹಾಗೂ ಮಂಗಳೂರು ವಿಶ್ವವಿದ್ಯಾನಿಲಯಗಳ ಪಿಎಚ್.ಡಿ. ಮಾರ್ಗದರ್ಶಕರಾಗಿ ಸೇವೆ ಸಲ್ಲಿಸಿದವರು. ‘ತರಂಗ’ ವಾರಪತ್ರಿಕೆಯ ಸಹಸಂಪಾದಕರಾಗಿ ಪೂರ್ಣಚಂದ್ರ ತೇಜಸ್ವಿ, ಕುವೆಂಪು, ಶಿವರಾಮ ಕಾರಂತರಂತಹ ಸಾಹಿತ್ಯ ದಿಗ್ಗಜರನ್ನು ಸಂದರ್ಶಿಸಿದ ಹೆಗ್ಗಳಿಕೆ ಇವರದ್ದು.
‘ಕರ್ನಾಟಕ ಸಾಹಿತ್ಯ ಅಕಾಡೆಮಿ’, ‘ಕರ್ನಾಟಕ ಪರಿಸರ ಪತ್ರಿಕೋದ್ಯಮ ಪ್ರಶಸ್ತಿ’ ಸೇರಿದಂತೆ ಹತ್ತಾರು ಗೌರವಗಳಿಗೆ ಪಾತ್ರರಾಗಿರುವ ಇವರು, 50ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಇವರ ಲೇಖನಗಳು ಕರ್ನಾಟಕ ಹಾಗೂ ಕೇರಳ ರಾಜ್ಯಗಳ ಶಾಲಾ-ಕಾಲೇಜುಗಳ ಪಠ್ಯಪುಸ್ತಕಗಳಲ್ಲಿ ಸ್ಥಾನ ಪಡೆದಿವೆ. ಮಣ್ಣಿನ ವಾಸನೆ, ಕೃಷಿ ಹಾಗೂ ಪರಿಸರ ಕಾಳಜಿಯನ್ನು ತಮ್ಮ ಬರಹಗಳಲ್ಲಿ ಮೈಗೂಡಿಸಿಕೊಂಡಿರುವ ನರೇಂದ್ರ ರೈರವರ ಉಪಸ್ಥಿತಿ ಈ ಬಾರಿಯ ಮಿಲಾದ್ ಫೆಸ್ಟ್‌ನ ಪ್ರಮುಖ ಆಕರ್ಷಣೆಯಾಗಿದೆ.
ವಿದ್ಯಾರ್ಥಿಗಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಮೂಡಿಬರಲಿದ್ದು, ಇಸ್ಲಾಮಿಕ್ ಕಲಾ ಜಗತ್ತಿಗೆ ನೂತನ ಮೆರುಗು ನೀಡಲಿವೆ. ಭವಿಷ್ಯದ ನಾಯಕರನ್ನು ರೂಪಿಸುವ ಈ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಹಬ್ಬಕ್ಕೆ ಸಾಕ್ಷಿಯಾಗಲು ‘ORBIT’ ವಿದ್ಯಾರ್ಥಿ ಒಕ್ಕೂಟವು ಸಾರ್ವಜನಿಕರು, ಪೋಷಕರು ಮತ್ತು ಅಭಿಮಾನಿಗಳನ್ನು ಪ್ರೀತಿಯಿಂದ ಆಹ್ವಾನಿಸಿದೆ.





