August 22, 2026

ಫರಂಗಿಪೇಟೆಯಲ್ಲಿ ನೂತನ ಮದ್ರಸ ಕಟ್ಟಡ ಉದ್ಘಾಟನೆ

0
IMG-20260821-WA0042

ಬಂಟ್ವಾಳ: ಫರಂಗಿಪೇಟೆ ಮುಹಿಯುದ್ದೀನ್ ಕೇಂದ್ರ ಜುಮಾ ಮಸೀದಿ ಅಧೀನದ ಇಸ್ಲಾಹುಲ್ ಮುಸ್ಲಿಮೀನ್ ಮದ್ರಸದ ನೂತನ ಕಟ್ಟಡದ ಉದ್ಘಾಟನಾ ಸಮಾರಂಭ ಆ.21ರಂದು ಫರಂಗಿಪೇಟೆಯಲ್ಲಿ ನಡೆಯಿತು.

ಬಹು. ಸಯ್ಯದುಲ್ ಉಲಮಾ ಸಯ್ಯದ್ ಮುಹಮ್ಮದ್ ಜಿಫ್ರಿ ಮುತ್ತುಕೋಯ ತಂಙಳ್ ಅವರು ನೂತನ ಮದ್ರಸ ಕಟ್ಟಡವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಆಧುನಿಕತೆಯ ವೇಗದ ಬದಲಾವಣೆಗಳಿಗೆ ಅನುಗುಣವಾಗಿ ವಿದ್ಯಾರ್ಥಿಗಳು ತಮ್ಮ ಜ್ಞಾನವನ್ನು ವಿಸ್ತರಿಸಿಕೊಳ್ಳಬೇಕು. ತಂತ್ರಜ್ಞಾನವು ವೇಗವಾಗಿ ಬೆಳೆಯುತ್ತಿರುವ ಇಂದಿನ ಸಂದರ್ಭದಲ್ಲಿ ಧಾರ್ಮಿಕ ಶಿಕ್ಷಣದ ಜತೆಗೆ ಉತ್ತಮ ಲೌಕಿಕ ಶಿಕ್ಷಣಕ್ಕೂ ಆದ್ಯತೆ ನೀಡುವ ಅಗತ್ಯವಿದೆ ಎಂದು ಹೇಳಿದರು.

ಕುರ್‌ಆನ್ ಕೇವಲ ಪಠಣಕ್ಕೆ ಸೀಮಿತವಾಗದೆ, ಅದರಲ್ಲಿರುವ ಮೌಲ್ಯಗಳು ಹಾಗೂ ಸಂದೇಶಗಳನ್ನು ಅರಿತು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಸತ್ಯ, ಪ್ರಾಮಾಣಿಕತೆ, ಸಹನೆ, ಪರಸ್ಪರ ಗೌರವ, ಕರುಣೆ ಮತ್ತು ಸಮಾಜದ ಬಗ್ಗೆ ಜವಾಬ್ದಾರಿಯುತ ಮನೋಭಾವವನ್ನು ಬೆಳೆಸಿಕೊಳ್ಳಲು ಕುರ್‌ಆನ್‌ನ ಅಧ್ಯಯನ ಸಹಕಾರಿಯಾಗುತ್ತದೆ ಎಂದು ಅವರು ತಿಳಿಸಿದರು.
ತಂತ್ರಜ್ಞಾನವನ್ನು ಜ್ಞಾನ ಸಂಪಾದನೆಯ ಉತ್ತಮ ಸಾಧನವಾಗಿ ಬಳಸಬೇಕು. ಮೊಬೈಲ್, ಇಂಟರ್‌ನೆಟ್ ಸೇರಿದಂತೆ ಆಧುನಿಕ ತಂತ್ರಜ್ಞಾನಗಳು ವಿದ್ಯಾರ್ಥಿಗಳ ಕಲಿಕೆಗೆ ನೆರವಾಗುವಂತಿರಬೇಕು. ಆದರೆ ತಂತ್ರಜ್ಞಾನದ ಬಳಕೆ ಶಿಕ್ಷಣ ಮತ್ತು ಉತ್ತಮ ಉದ್ದೇಶಗಳಿಗೆ ಸೀಮಿತವಾಗಿದ್ದು, ಸಮಯದ ಮೌಲ್ಯವನ್ನು ಅರಿತುಕೊಳ್ಳಬೇಕು. ಧಾರ್ಮಿಕ ಹಾಗೂ ನೈತಿಕ ಮೌಲ್ಯಗಳೊಂದಿಗೆ ಬೆಳೆದ ವಿದ್ಯಾರ್ಥಿಗಳು ಸಮಾಜಕ್ಕೆ ಉತ್ತಮ ಕೊಡುಗೆ ನೀಡಬಲ್ಲರು ಎಂದು ಅವರು ಹೇಳಿದರು.

ಮದ್ರಸ ಶಿಕ್ಷಣವು ಮಕ್ಕಳಲ್ಲಿ ಧಾರ್ಮಿಕ ಜ್ಞಾನ ಮಾತ್ರವಲ್ಲದೆ ಶಿಸ್ತು, ಉತ್ತಮ ನಡತೆ ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಪೋಷಕರು ಮಕ್ಕಳ ಶಿಕ್ಷಣದ ಬಗ್ಗೆ ಹೆಚ್ಚಿನ ಗಮನ ಹರಿಸಿ, ಮದ್ರಸ ಹಾಗೂ ಶಾಲಾ ಶಿಕ್ಷಣ ಎರಡಕ್ಕೂ ಸಮಾನ ಮಹತ್ವ ನೀಡಬೇಕು ಎಂದು ಕರೆ ನೀಡಿದರು.
ಜಮಾತ್ ಅಧ್ಯಕ್ಷ, ಜಿ.ಪಂ‌.ಮಾಜಿ ಸದಸ್ಯ ಉಮ್ಮರ್ ಫಾರೂಕ್ ಮಾತನಾಡಿ ದೇವರ ಅನುಗ್ರಹ ಹಾಗೂ ಜಮಾತಿನ ದಾನಿಗಳ ಹಾಗೂ ಜಮಾತಿನ ಸರ್ವ ಸದಸ್ಯರ ಸಹಕಾರದಿಂದ ಇಷ್ಟೊಂದು ದೊಡ್ಡ ಮದರಸ ಕಟ್ಟಡದ ನಿರ್ಮಾಣ ಮಾಡಲು ಸಾಧ್ಯವಾಯಿತು ಎಂದು ಅವರು ತಿಳಿಸಿದರು.

ಕಾರ್ಯಕ್ರಮದಲ್ಲಿ ಸಮಸ್ತ ಕೇಂದ್ರ ಮುಶಾವರ ಸದಸ್ಯ ಅಬ್ದುಲ್ ಖಾದರ್ ಖಾಸಿಮಿ ಬಂಬ್ರಾಣ,ಫರಂಗಿಪೇಟೆ ಕೇಂದ್ರ ಜುಮಾ ಮಸೀದಿ ಖತೀಬರಾದ ರಶೀದ್ ರಹಮಾನಿ, ಉದ್ಯಮಿ ಅಬುಸಾಲಿ ಅರ್ಕುಳ ( ದುಬೈ), ಪುದು ಗ್ರಾಮ ಪಂಚಾಯತ್ ಅಧ್ಯಕ್ಷ ರಮ್ಲಾನ್ ಮಾರಿಪಳ್ಳ, ವಳಚ್ಚಿಲ್ ಖತೀಬ್ ಅಬ್ದುಲ್ ಖಾದರ್ ಧಾರಿಮಿ ಕುಕ್ಕಿಲ, ಫರಂಗಿಪೇಟೆ ಜಮಾತೆ ಮಾಜಿ ಖತೀಬರುಗಳಾದ ಝಾಕಾರಿಯಾ ಧಾರಿಮಿ, ಅಬ್ಬಾಸ್ ಧಾರಿಮಿ, ಉಸ್ಮಾನ್ ಧಾರಿಮಿ, ಅಮ್ಮೆಮಾರ್ ಖತೀಬ್ ಸಿದ್ದೀಕ್ ಫೈಜಿ, ಕಣ್ಣೂರು ಖತೀಬ್ ಅನ್ಸಾರ್ ಫೈಜಿ, ಫರಂಗಿಪೇಟೆ ಮದಸರದ ಸದರ್ ಉಸ್ತಾದ್ ಇಸ್ಮಾಯಿಲ್ ಹನೀಫ್ ಸಜೀಪ, ಫರಂಗಿಪೇಟೆ ಮಸೀದಿ ಉಪಾಧ್ಯಕ್ಷ ಬಶೀರ್ ಟಿ.ಕೆ.ಫರಂಗಿಪೇಟೆ ಜಮಾತ್ ಕಾರ್ಯದರ್ಶಿ ಯೂಸಫ್ ಅಲಂಕಾರ್, ಖಜಾಂಚಿ ಅಬ್ದುಲ್ ಮಜೀದ್ ಫರಂಗಿಪೇಟೆ, ಕುಂಪಣಮಜಲು ಅರಫಾ ಜುಮಾ ಮಸೀದಿ ಅಧ್ಯಕ್ಷ ಬುಖಾರಿ ಕುಂಪಣಮಜಲು, ಅಮ್ಮೆಮಾರ್ ಜಮಾತ್ ಅಧ್ಯಕ್ಷ ಅಬುಸಾಲಿ ಉಸ್ತಾದ್, ತಾ.ಪಂ.ಮಾಜಿ ಸದಸ್ಯ ಆಸೀಫ್ ಇಕ್ಬಾಲ್, ಪುದು ಗ್ರಾ.ಪಂ. ಸದಸ್ಯರಾದ ಮಹಮ್ಮದ್ ಮೋನು ಹಾಗೂ ಇಶಾಮ್, ಪರಂಗಿಪೇಟೆ, ಮದ್ರಸ ಮ್ಯಾನೇಜ್‌ಮೆಂಟ್ ಕಮಿಟಿ ಅಧ್ಯಕ್ಷ ಹಸನಬ್ಬ ಗುಡ್ಡೆಮನೆ, ಇಬ್ರಾಹಿಂ, ಲೋಬಲ್ ಮಾರುಕಟ್ಟೆ ಸಂಘದ ಅಧ್ಯಕ್ಷ ಫೈರೋಜ್ ಇ.ಬಿ.ಆರ್ ಹಾಗೂ ಕಾರ್ಯಕ್ರಮದಲ್ಲಿ ಧಾರ್ಮಿಕ ಮುಖಂಡರು, ಮದ್ರಸ ಆಡಳಿತ ಮಂಡಳಿ ಸದಸ್ಯರು, ವಿದ್ಯಾರ್ಥಿಗಳು, ಪೋಷಕರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು. ಮುಹಿಯುದ್ದೀನ್ ಕೇಂದ್ರ ಜುಮಾ ಮಸೀದಿ ಹಾಗೂ ಇಸ್ಲಾಹುಲ್ ಮುಸ್ಲಿಮೀನ್ ಮದ್ರಸದ ಸರ್ವ ಸದಸ್ಯರು ಉಪಸ್ಥಿತರಿದ್ದರು.

ಆ.22ರಂದು ಸಭಾಂಗಣ ಉದ್ಘಾಟನೆ:
ಆ.22ರಂದು ಶನಿವಾರ ಕರ್ನಾಟಕ ಸರಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಹಜ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜನಾಬ್ ಹಾಜಿ ಯು.ಟಿ. ಖಾದರ್ ಫರೀದ್ ಅವರು ಮದ್ರಸದ ಸಭಾಂಗಣವನ್ನು ಉದ್ಘಾಟಿಸಲಿದ್ದಾರೆ.
ಫರಂಗಿಪೇಟೆ ಜಮಾತ್ ಖತೀಬ್ ರಶೀದ್ ರಹಮಾನಿ ಸ್ವಾಗತಿಸಿ, ವಂದಿಸಿದರು. ಖಮರುದ್ದೀನ್ ಫರಂಗಿಪೇಟೆ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *

error: Content is protected !!