October 9, 2026

ಮುಲ್ಕಿ: ಚಂದ್ರಮೌಳೇಶ್ವರ ದೇವಸ್ಥಾನದ ಕಾಣಿಕೆ ಹುಂಡಿ ಕಳ್ಳತನ: ಆರೋಪಿ ರವಿಕುಮಾರ್ ಬಂಧನ

0
IMG-20260821-WA0007

ಮಂಗಳೂರು: ಮುಲ್ಕಿ ಪೊಲೀಸ್‌ ಠಾಣಾ ವ್ಯಾಪ್ತಿಯ ಪ್ರಸಿದ್ಧ ಚಂದ್ರಮೌಳೇಶ್ವರ ದೇವಸ್ಥಾನದಲ್ಲಿ ಸಿಸಿಟಿವಿ ಕ್ಯಾಮೆರಾ ತಿರುಗಿಸಿ ಕಾಣಿಕೆ ಹುಂಡಿಯ ಬೀಗ ಮುರಿದು ಕಳ್ಳತನ ಮಾಡಿದ್ದ ಆರೋಪಿಯನ್ನು ಮಂಗಳೂರು ನಗರದ ಮುಲ್ಕಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತನಿಂದ ಕಳುವಾಗಿದ್ದ ನಗದನ್ನು ವಶಪಡಿಸಿಕೊಳ್ಳಲಾಗಿದೆ. ಕೊಡಗು ಜಿಲ್ಲೆ ಮಡಿಕೇರಿ ತಾಲೂಕಿನ ಅಯ್ಯಂಗೇರಿ ಅಜ್ಜಿಮಡ ನಿವಾಸಿ ರವಿಕುಮಾರ ಅಲಿಯಾಸ್ ರವಿ ಹೆಚ್.ಜಿ. ಬಂಧಿತ ಆರೋಪಿ.

ಆಗಸ್ಟ್ 18ರ ಮಧ್ಯರಾತ್ರಿ ಚಂದ್ರಮೌಳೇಶ್ವರ ದೇವಸ್ಥಾನದ ಮಾಡಿನ ಮೇಲಿದ್ದ ಜಾಲರಿಯ ಮೂಲಕ ಒಳಪ್ರವೇಶಿಸಿದ್ದ ಆರೋಪಿ, ಕೃತ್ಯ ಎಸಗುವ ಮುನ್ನ ದೇವಸ್ಥಾನದಲ್ಲಿದ್ದ ಸಿಸಿಟಿವಿ ಕ್ಯಾಮೆರಾವನ್ನು ಬೇರೆಡೆಗೆ ತಿರುಗಿಸಿದ್ದಾನೆ. ಬಳಿಕ ಕಾಣಿಕೆ ಡಬ್ಬಿಯ ಬೀಗ ಮುರಿದು ನಗದನ್ನು ದೋಚಿದ್ದ. ಆದರೆ, ಆತ ಕ್ಯಾಮೆರಾ ಮುಟ್ಟುತ್ತಿದ್ದಂತೆಯೇ ದೇವಸ್ಥಾನದ ಭದ್ರತಾ ವ್ಯವಸ್ಥೆ ಕಾರ್ಯಪ್ರವೃತ್ತವಾಗಿದೆ. ಸಿಸಿಟಿವಿ ಅಳವಡಿಸಿದ್ದ ಕುಂದಾಪುರ ಮೂಲದ ‘ಸೈನ್ ಇನ್ ಸೆಕ್ಯೂರಿಟಿ’ ಕಂಪನಿಯ ಕಂಟ್ರೋಲ್ ರೂಮ್‌ಗೆ ತಕ್ಷಣವೇ ತುರ್ತು ಅಲರ್ಟ್ ಸಂದೇಶ ರವಾನೆಯಾಗಿದೆ.

 

ಇನ್ನು ಅಲರ್ಟ್ ಸಂದೇಶ ಬರುತ್ತಿದ್ದಂತೆ ಸೆಕ್ಯೂರಿಟಿ ಕಂಪನಿಯ ಸಿಬ್ಬಂದಿ ತಕ್ಷಣ ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಮುಲ್ಕಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಕಾರ್ಯಪ್ರವೃತ್ತರಾದ ಮುಲ್ಕಿ ಪೊಲೀಸ್ ಠಾಣೆಯ ಸಬ್‌ ಇನ್‌ಸ್ಪೆಕ್ಟರ್ ರಾಘವೇಂದ್ರ ನಾಯಕ್ ಮತ್ತು ಸ್ಥಳೀಯ ಗ್ರಾಮಸ್ಥರು ಕ್ಷಣಮಾತ್ರದಲ್ಲಿ ದೇವಸ್ಥಾನವನ್ನು ಸುತ್ತುವರೆದಿದ್ದಾರೆ. ಪೊಲೀಸರ ಸದ್ದು ಕೇಳಿ ದೇವಸ್ಥಾನದ ಒಳಭಾಗದಲ್ಲಿದ್ದ ಸುಬ್ರಹ್ಮಣ್ಯ ಸ್ವಾಮಿ ಗುಡಿಯೊಳಗೆ ಅಡಗಿ ಕುಳಿತಿದ್ದ ರವಿಯನ್ನು ಬಂಧಿಸಲಾಗಿದೆ. ಸದ್ಯ ಮುಲ್ಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಯ ವಿಚಾರಣೆ ನಡೆಸುತ್ತಿದ್ದಾರೆ.

ಆತನಿಂದ ಕಳವು ಮಾಡಲಾಗಿದ್ದ ₹2,195 ನಗದನ್ನು ಜಪ್ತಿ ಮಾಡಲಾಗಿದ್ದು, ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!