August 2, 2026

ಬಂಟ್ವಾಳ: ಮತ್ತೆ ಏರಿಕೆಯಾದ ನೇತ್ರಾವತಿ ನೀರಿನ ಮಟ್ಟ: 8.3 ಮೀ ನಲ್ಲಿ ಹರಿಯುತ್ತಿರುವ ನೇತ್ರಾವತಿ

0
image_editor_output_image1495459612-1785667888897

ಬಂಟ್ವಾಳ: ಬೆಳಿಗ್ಗೆ ಇಳಿಮುಖವಾಗಿದ್ದ ನೇತ್ರಾವತಿ ನದಿಯ ನೀರಿನ ಮಟ್ಟ ಮಧ್ಯಾಹ್ನದ ಬಳಿಕ ಮತ್ತೆ ಏರಿಕೆಯಾಗಿದ್ದು, ಬಂಟ್ವಾಳ ಭಾಗದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಬೆಳಿಗ್ಗೆ ಸುಮಾರು 7.4 ಮೀಟರ್ ಇದ್ದ ನೀರಿನ ಮಟ್ಟ ಮಧ್ಯಾಹ್ನ 1 ಗಂಟೆಯ ಬಳಿಕ ಏಕಾಏಕಿ ಏರಿಕೆಯಾಗಿ 8.3 ಮೀಟರ್ ತಲುಪಿದೆ. ಅಪಾಯದ ಮಟ್ಟ 8.5 ಮೀಟರ್ ಆಗಿರುವ ಹಿನ್ನೆಲೆಯಲ್ಲಿ ನದಿ ತೀರದ ನಿವಾಸಿಗಳು ಹಾಗೂ ತಗ್ಗು ಪ್ರದೇಶಗಳ ಜನರು ಎಚ್ಚರಿಕೆಯಿಂದ ಇರಲು ಆಡಳಿತ ಸೂಚಿಸಿದೆ.

ಘಟ್ಟ ಪ್ರದೇಶದಲ್ಲಿ ಮುಂದುವರಿದ ಮಳೆಯ ಪರಿಣಾಮ ನದಿಯ ಹರಿವು ಮತ್ತೆ ಹೆಚ್ಚಾಗಿದ್ದು, ತಗ್ಗು ಪ್ರದೇಶಗಳಿಗೆ ನೀರು ನುಗ್ಗಲಾರಂಭಿಸಿದೆ. ಬಂಟ್ವಾಳ ಪೇಟೆ ಮೂಲಕ ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ಪೇಟೆ ರಸ್ತೆ ಕೋಟೆಕಣಿ ಎಂಬಲ್ಲಿ ರಸ್ತೆಗೆ ನೀರು ಬಂದು ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ.

ಇದೇ ವೇಳೆ ಬಡ್ಡಕಟ್ಟೆ ಸಮೀಪದ ರಾಯರಚಾವಡಿ–ಕೋಟೆಕಣಿ ರಸ್ತೆ ಮೇಲೆಯೂ ಮತ್ತೆ ನೀರು ಹರಿದು ಬಂದ ಪರಿಣಾಮ ರಸ್ತೆ ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಸುರಕ್ಷತೆಯ ದೃಷ್ಟಿಯಿಂದ ಈ ಮಾರ್ಗದಲ್ಲಿ ವಾಹನ ಸಂಚಾರವನ್ನು ತಪ್ಪಿಸಲು ಸೂಚಿಸಲಾಗಿದ್ದು, ವಾಹನ ಸವಾರರು ಬೈಪಾಸ್ ಮೂಲಕ ಮುಖ್ಯ ರಸ್ತೆಯನ್ನು ಬಳಸುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.

ನೀರಿನ ಮಟ್ಟದಲ್ಲಿ ಮತ್ತೆ ಏರಿಕೆ ಕಂಡುಬಂದಿರುವ ಹಿನ್ನೆಲೆಯಲ್ಲಿ ತಾಲೂಕು ಆಡಳಿತ ಪರಿಸ್ಥಿತಿಯ ಮೇಲೆ ನಿರಂತರ ನಿಗಾ ವಹಿಸಿದೆ. ನದಿ ತೀರದ ಹಾಗೂ ತಗ್ಗು ಪ್ರದೇಶದ ನಿವಾಸಿಗಳು ಅನಗತ್ಯವಾಗಿ ಹೊರಗಡೆ ಸಂಚರಿಸದಂತೆ ಹಾಗೂ ಅಗತ್ಯವಿದ್ದಲ್ಲಿ ಸುರಕ್ಷಿತ ಸ್ಥಳಗಳಿಗೆ ತೆರಳಲು ಸಿದ್ಧರಾಗಿರುವಂತೆ ಸೂಚಿಸಲಾಗಿದೆ. ಸಂಜೆ ವೇಳೆಗೆ ಮಳೆ ಮುಂದುವರಿದರೆ ನೀರಿನ ಮಟ್ಟ ಇನ್ನಷ್ಟು ಏರಿಕೆಯಾಗುವ ಸಾಧ್ಯತೆಯಿದ್ದು, ಸಾರ್ವಜನಿಕರು ಎಚ್ಚರಿಕೆ ವಹಿಸುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!