ಲಖಿಂಪುರ್ ಖೇರಿ ಹಿಂಸಾಚಾರ ಪ್ರಕರಣದ ಆರೋಪಿ ಆಶಿಶ್ ಮಿಶ್ರಾ ಗೆ ಡೆಂಗ್ಯೂ: ಆಸ್ಪತ್ರೆಗೆ ದಾಖಲು
ಲಕ್ನೋ: ಲಖಿಂಪುರ್ ಖೇರಿ ಹಿಂಸಾಚಾರ ಪ್ರಕರಣದ ಮುಖ್ಯ ಆರೋಪಿ, ಕೇಂದ್ರ ಸಚಿವ ಅಜಯ್ ಮಿಶ್ರಾ ತೇಣಿ ಅವರ ಪುತ್ರ ಆಶಿಶ್ ಮಿಶ್ರಾ ಡೆಂಗ್ಯೂ ಖಾಯಿಲೆಯಿಂದ ಬಳಲುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅವರನ್ನು ಜೈಲಾಸ್ಪತ್ರೆಗೆ ದಾಖಲಿಸಲಾಗಿದೆ.
ಕಳೆದ ಶುಕ್ರವಾರ ಜ್ವರದಿಂದ ಬಳಲುತ್ತಿರುವುದಾಗಿ ಮಿಶ್ರಾ ಹೇಳಿದ್ದರು. ಆ ಬಳಿಕ ಅವರ ರಕ್ತದ ತಪಾಸಣೆ ನಡೆಸಿದಾಗ ಡೆಂಗ್ಯೂವಿನಿಂದ ಬಳಲುತ್ತಿರುವುದು ಖಾತ್ರಿಯಾಗಿದೆ. ಹೀಗಾಗಿ ಶನಿವಾರ ರಾತ್ರಿ 10 ಗಂಟೆಯ ಸುಮಾರಿಗೆ ಅವರನ್ನು ಜೈಲಾಸ್ಪತ್ರೆಗೆ ಸೇರಿಸಲಾಗಿದೆ.
ಲಖಿಂಪುರ್ ಖೇರಿ ಎಂಬಲ್ಲಿನ ಟಿಕುನಿಯ ಪ್ರದೇಶದಲ್ಲಿ ಪ್ರತಿಭಟನಾನಿರತ ರೈತರ ಮೇಲೆ ಆಶಿಶ್ ಮಿಶ್ರಾ ಅವರು ಕಾರು ಹರಿಸಿದ ಗಂಭೀರ ಆರೋಪ ಎದುರಿಸುತ್ತಿದ್ದಾರೆ. ಈ ಘಟನೆಯಲ್ಲಿ ನಾಲ್ವರು ರೈತರು ಅಸುನೀಗಿದ್ದರು. ರಾಷ್ಟ್ರವ್ಯಾಪಿ ಸಂಚಲನಕ್ಕೆ ಕಾರಣವಾದ ಪ್ರಕರಣದ ಬಳಿಕ ಮಿಶ್ರಾ ಅವರನ್ನು ಪೊಲೀಸರು ಬಂಧಿಸಿದ್ದರು.





