July 16, 2026

ಬಂಟ್ವಾಳ: ಬಸ್ ನಿಲ್ದಾಣದಲ್ಲಿ ಯುವತಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ, ಹತ್ಯೆ

0
image_editor_output_image-1985855277-1784207487425

ಬಂಟ್ವಾಳ : ಬಂಟ್ವಾಳ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಯುವತಿಯೊಬ್ಬರನ್ನು ಮಾರಕವಾಗಿ ಹಲ್ಲೆ ನಡೆಸಿ ಹತ್ಯೆ ಮಾಡಿದ ಘಟನೆ ಗುರುವಾರ ವರದಿಯಾಗಿದೆ.

ಮೃತ ಯುವತಿಯನ್ನು ಕಕ್ಯಪದವು ನಿವಾಸಿ ಲಾವಣ್ಯ ಎಂದು ಗುರುತಿಸಲಾಗಿದೆ. ಅವರು ಕಲ್ಲಡ್ಕದ ಖಾಸಗಿ ನರ್ಸಿಂಗ್ ಹೋಮ್‌ನಲ್ಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.

ಲಭ್ಯವಿರುವ ಪ್ರಾಥಮಿಕ ಮಾಹಿತಿಯ ಪ್ರಕಾರ, ಲಾವಣ್ಯ ಅವರು ಕಕ್ಯಪದವು ಕಡೆಗೆ ತೆರಳಲು ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಕುಳಿತಿದ್ದರು ಎನ್ನಲಾಗಿದೆ. ಈ ವೇಳೆ ಅವರು ತಮ್ಮ ಸಂಬಂಧಿಕರೊಬ್ಬರಿಗೆ ದೂರವಾಣಿ ಕರೆ ಮಾಡಿ, “ತನ್ನ ಪಕ್ಕದಲ್ಲಿ ಓರ್ವ ಯುವಕ ಕುಳಿತಿದ್ದಾನೆ” ಎಂದು ತಿಳಿಸಿದ್ದು, ಬಳಿಕ ಕರೆ ಸಂಪರ್ಕ ಕಡಿತಗೊಂಡಿದೆ ಎಂದು ಹೇಳಲಾಗಿದೆ.

ಬಸ್‌ನಲ್ಲಿದ್ದ ಪ್ರಯಾಣಿಕರ ಮಾಹಿತಿ ಪ್ರಕಾರ, ಬಳಿಕ ಯುವತಿ ಬಸ್‌ನಿಂದ ಕೆಳಗಿಳಿದಿದ್ದಾರೆ. ಅವರು ಇಳಿದ ತಕ್ಷಣ ಯುವಕ ಆಕೆಯನ್ನು ಬೆನ್ನಟ್ಟಿದನು ಎನ್ನಲಾಗಿದ್ದು, ತನ್ನ ಬ್ಯಾಗ್‌ನಿಂದ ಹರಿತವಾದ ಆಯುಧವನ್ನು ಹೊರತೆಗೆದಾಗ ಯುವತಿ ಓಡಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಈ ವೇಳೆ ಯುವತಿಯ ಮೇಲೆ ಮಾರಕ ಹಲ್ಲೆ ನಡೆಸಿ, ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ.

ಘಟನೆಯಿಂದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಮಾಹಿತಿ ತಿಳಿಯುತ್ತಿದ್ದಂತೆಯೇ ಬಂಟ್ವಾಳ ಉಪವಿಭಾಗದ ಪೊಲೀಸ್ ಅಧಿಕಾರಿಗಳು, ನಗರ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯ ಪತ್ತೆಗಾಗಿ ವ್ಯಾಪಕ ಶೋಧ ಕಾರ್ಯ ಆರಂಭಿಸಿದ್ದು, ಘಟನೆಯ ನಿಖರ ಕಾರಣ ಮತ್ತು ಹಿನ್ನೆಲೆಯ ಕುರಿತು ತನಿಖೆ ಮುಂದುವರಿದಿದೆ.

Leave a Reply

Your email address will not be published. Required fields are marked *

error: Content is protected !!