ಸುಳ್ಯ: ಕಂದಡ್ಕದಲ್ಲಿ ಬೈ ಹುಲ್ಲು ಲಾರಿಗೆ ಬೆಂಕಿ
ಸುಳ್ಯ: ತಾಲೂಕಿನ ಕಂದಡ್ಕ ಸಮೀಪ ಬೈಹುಲ್ಲು ಹೇರಿಕೊಂಡು ಬರುತ್ತಿದ್ದ ಲಾರಿಗೆ ಬೆಂಕಿ ತಗುಲಿ ಧಗಧಗನೆ ಉರಿದು ಲಾರಿ ಸಂಪೂರ್ಣ ಭಸ್ಮಗೊಂಡ ಘಟನೆ ನಿನ್ನೆ ರಾತ್ರಿ ಸುಮಾರು 3 ಗಂಟೆಗೆ ಸಂಭವಿಸಿರುವುದಾಗಿ ವರದಿಯಾಗಿದೆ.
ಘಟ್ಟ ಭಾಗದಿಂದ ಕೇರಳಕ್ಕೆ ಬೈಹುಲ್ಲನ್ನು ಸಾಗಿಸುವ ಲಾರಿ ಕಂದಡ್ಕ ಬಳಿ ವಿದ್ಯುತ್ ಟ್ರಾನ್ಸ್ಫರ್ ಕಂಬಕ್ಕೆ ಡಿಕ್ಕಿ ಹೊಡೆದಿದ್ದು, ಆ ಸಂದರ್ಭದಲ್ಲಿ ಅದೇ ಕಂಬದಿಂದ ಹಾದುಹೋಗುತ್ತಿದ್ದ ಹೈಟೆನ್ಷನ್ ವಿದ್ಯುತ್ ತಂತಿ ಲಾರಿಯ ಮೇಲೆ ಬಿದ್ದ ಪರಿಣಾಮ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ. ಈ ವೇಳೆ ಬೈ ಹುಲಿಗೆ ಬೆಂಕಿ ಆವರಿಸಿಕೊಂಡು ಕ್ಷಣಮಾತ್ರದಲ್ಲಿ ಧಗಧಗನೆ ಉರಿಯಲಾರಂಭಿಸಿದೆ.
ಘಟನೆಯ ಮಾಹಿತಿ ತಿಳಿದ ಸುಳ್ಯ ಮತ್ತು ಪುತ್ತೂರು ಭಾಗದಿಂದ ಅಗ್ನಿಶಾಮಕ ದಳದ ಮೂರು ವಾಹನಗಳು ಸ್ಥಳಕ್ಕೆ ಬಂದು ಬೆಂಕಿ ನಂದಿಸುವಲ್ಲಿ ಶ್ರಮಿಸಿದ್ದಾರೆ. ಅಷ್ಟೊತ್ತಿಗಾಗಲೇ ಲಾರಿ ಸಂಪೂರ್ಣ ಬೆಂಕಿಯ ಕೆನ್ನಾಲಗೆ ತುತ್ತಾಗಿ ಅವಶೇಷಗಳು ಮಾತ್ರ ಉಳಿದುಕೊಂಡಿದೆ. ಬೆಂಕಿ ಹೊತ್ತಿಕೊಂಡ ಸಮಯದಲ್ಲಿ ಲಾರಿಯ ಚಾಲಕ ಹಾಗೂ ಮತ್ತೋರ್ವರು ಹೊರಕ್ಕೆ ಜಿಗಿದು ಜೀವಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.





