ಇಂಡಿಗೊ ವಿಮಾನದ ಸ್ಪೀಕರ್ ಬಾಕ್ಸ್ ನಲ್ಲಿ 4.27 ಕೋಟಿ ರೂ. ಮೌಲ್ಯದ ಚಿನ್ನದ ಬಿಸ್ಕತ್ ಪತ್ತೆ
ಅಹ್ಮದಾಬಾದ್: ದುಬೈನಿಂದ ಆಗಮಿಸಿದ ಇಂಡಿಗೊ ವಿಮಾನದ ಸ್ಪೀಕರ್ ಬಾಕ್ಸ್ ನಲ್ಲಿ 4.27 ಕೋಟಿ ರೂ. ಮೌಲ್ಯದ ಚಿನ್ನದ ಬಿಸ್ಕತ್ ಗಳನ್ನು ಕಸ್ಟಮ್ಸ್ ಅಧಿಕಾರಿಗಳು ಪತ್ತೆ ಹಚ್ಚಿರುವ ಘಟನೆ ಶುಕ್ರವಾರ ಅಹ್ಮದಾಬಾದ್ ನ ಸರ್ದಾರ್ ವಲ್ಲಭ ಭಾಯಿ ಪಟೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ.
ವಿಮಾನದ ಇಂಜಿನಿಯರ್ ಗಳ ನೆರವಿನೊಂದಿಗೆ ಇಂಡಿಗೊ ವಿಮಾನ ಸಂಖ್ಯೆ 6E-1478 ಅನ್ನು ತಪಾಸಣೆ ನಡೆಸಿದ ಕಸ್ಟಮ್ಸ್ ಅಧಿಕಾರಿಗಳು, ವಿಮಾನದ ಮುಂಭಾಗದಲ್ಲಿರುವ ಶೌಚಾಲಯದಲ್ಲಿನ ಸ್ಪೀಕರ್ ಬಾಕ್ಸ್ ಒಳಗೆ ಕಪ್ಪು ಪ್ಲಾಸ್ಟಿಕ್ ಟೇಪ್ ನಲ್ಲಿ ಎರಡು ಪೌಚ್ ಗಳನ್ನು ಸುತ್ತಿಟ್ಟಿರುವುದನ್ನು ಪತ್ತೆ ಹಚ್ಚಿದ್ದಾರೆ.
ಪೌಚ್ ಗಳನ್ನು ಪರಿಶೀಲಿಸಿದಾಗ, 24 ಚಿನ್ನದ ಬಿಸ್ಕತ್ತುಗಳು ಪತ್ತೆಯಾಗಿದ್ದು, ಅವುಗಳ ಒಟ್ಟು ತೂಕ 2,799.3 ಗ್ರಾಂಗಳಾಗಿತ್ತು ಎಂದು ಹೇಳಲಾಗಿದೆ. ಮುಟ್ಟುಗೋಲು ಹಾಕಿಕೊಂಡಿರುವ ಈ ಚಿನ್ನದ ಬೆಲೆ ಸ್ಥಳೀಯ ಮಾರುಕಟ್ಟೆಯಲ್ಲಿ 4.27 ಕೋಟಿ ರೂ. ಎಂದು ಅಂದಾಜಿಸಲಾಗಿದೆ.
ಕಸ್ಟಮ್ಸ್ ಕಾಯ್ದೆಯನ್ನು ಉಲ್ಲಂಘಿಸಿ, ಚಿನ್ನವನ್ನು ಭಾರತಕ್ಕೆ ಕಳ್ಳಸಾಗಣೆ ಮಾಡಲು ಯತ್ನಿಸಿರುವಂತೆ ತೋರುತ್ತಿದೆ ಎಂದು ಕಸ್ಟಮ್ಸ್ ಅಧಿಕಾರಿಗಳು ತಿಳಿಸಿದ್ದಾರೆ. ವಿಮಾನದ ಯಾವುದೇ ಪ್ರಯಾಣಿಕರು ಅಥವಾ ವಿಮಾನದ ಸಿಬ್ಬಂದಿಗಳು ಈ ಚಿನ್ನದ ವಾರೀಸುದಾರಿಕೆಯನ್ನು ಪ್ರತಿಪಾದಿಸದೆ ಇರುವುದರಿಂದ ಕಸ್ಟಮ್ಸ್ ಕಾಯ್ದೆಯಡಿ ಚಿನ್ನವನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಈ ಕುರಿತು ತನಿಖೆ ಮುಂದುವರಿದಿದೆ.




