ಶಿವಮೊಗ್ಗ: ಮಹಜರ್ ವೇಳೆ ಪೊಲೀಸ್ ಸಿಬ್ಬಂದಿಗೆ ಹಲ್ಲೆ: ಆರೋಪಿ ಕಾಲಿಗೆ ಪೊಲೀಸರಿಂದ ಗುಂಡೇಟು
ಶಿವಮೊಗ್ಗ: ತಾಲೂಕಿನ ಹೊಳೆಬೆನವಳ್ಳಿ ಸಮೀಪದ ರಿಂಗ್ ರೋಡ್‌ನಲ್ಲಿ ಮಹಜರಿಗೆ ಕರೆದೊಯ್ಯುವ ವೇಳೆ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ ನರಸಿಂಹ ಕೊಲೆ ಕೇಸ್ ಆರೋಪಿ ಮಧು ಕಾಲಿಗೆ ಪೊಲೀಸರು ಗುಂಡೇಟು ಹೊಡೆದಿರುವ ಘಟನೆ ನಡೆದಿದೆ.
ಶಿವಮೊಗ್ಗದಲ್ಲಿ ರೌಡಿಶೀಟರ್ ನರಸಿಂಹ ಕೊಲೆ ಕೇಸ್ ಸಂಬಂಧ ಆರೋಪಿಗಳನ್ನು ಸ್ಥಳ ಮಹಜರಿಗೆ ಕರೆದೊಯ್ಯಲಾಗಿತ್ತು. ಈ ವೇಳೆ ಕೋಟೆ ಠಾಣೆ ಕ್ರೈಮ್ ಸಿಬ್ಬಂದಿ ಅಂಜನಪ್ಪ ಮೇಲೆ ಆರೋಪಿ ಮಧು ಹಲ್ಲೆ ಮಾಡಿದ್ದಾನೆ. ಏರ್ ಫೈರ್ ಮಾಡಿ ವಾರ್ನ್ ಮಾಡಿದರೂ ಮಾತು ಕೇಳದ ಹಿನ್ನೆಲೆ ಕೋಟೆ ಠಾಣೆ ಇನ್ಸ್‌ಪೆಕ್ಟರ್ ಹರೀಶ್ ಪಟೇಲ್ ಕಾಲಿಗೆ ಫೈರ್ ಮಾಡಿದ್ದಾರೆ.
ಗಾಯಾಳು ಮಧು ಹಾಗೂ ಪೊಲೀಸ್ ಸಿಬ್ಬಂದಿಯನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಎಸ್ಪಿ ಬಿ. ನಿಖಿಲ್ ಮೆಗ್ಗಾನ್ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನೆಸಿದ್ದಾರೆ. ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.




