ನುಗ್ಗಿ ಮಾರಕಾಸ್ತ್ರಗಳಿಂದ ಕೊಚ್ಚಿ ಯೂಟ್ಯೂಬರ್ ಕೊಲೆ
ಹೈದರಾಬಾದ್: ಯೂಟ್ಯೂಬರ್ ಒಬ್ಬರನ್ನು ಅವರ ಮನೆಗೆ ನುಗ್ಗಿ ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಹೈದರಾಬಾದ್‌ನ ಗೋಲ್ಕೊಂಡ ಪ್ರದೇಶದಲ್ಲಿ ಶುಕ್ರವಾರ ನಡೆದಿದೆ.
ಕೊಲೆಯಾದ ವ್ಯಕ್ತಿಯನ್ನು ಶೈಕ್ ಮಹಬೂಬ್ ಅಲಿಯಾಸ್ ಚಾಂಡಿ ಮಸೂದ್(30) ಎಂದು ಗುರುತಿಸಲಾಗಿದೆ. ಗೋಲ್ಕೊಂಡ ಪೊಲೀಸ್ ಠಾಣೆ ವ್ಯಾಪ್ತಿಯ ಕುಮಾರ್‌ವಾಡಿಯಲ್ಲಿ ಶುಕ್ರವಾರ ಮಧ್ಯಾಹ್ನ 3:20 ರ ಸುಮಾರಿಗೆ ಈ ಘಟನೆ ನಡೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಮಸೂದ್ ಶುಕ್ರವಾರದ ಪ್ರಾರ್ಥನೆಯ ಬಳಿಕ ಮನೆಗೆ ಹಿಂದಿರುಗಿದಾಗ ಜನರ ಗುಂಪೊಂದು ತನ್ನನ್ನು ಹಿಂಬಾಲಿಸುತ್ತಿರುವುದನ್ನು ಗಮನಿಸಿದ್ದಾರೆ. ಬಳಿಕ ದಾಳಿಕೋರರು ಬಲವಂತವಾಗಿ ನಿವಾಸಕ್ಕೆ ನುಗ್ಗಿ ಹಲವಾರು ಬಾರಿ ಇರಿದಿದ್ದಾರೆ ಎಂದು ಪ್ರಾಥಮಿಕ ತನಿಖೆ ವೇಳೆ ತಿಳಿದುಬಂದಿದೆ.
ಪ್ರಮುಖ ಆರೋಪಿ, ಶೇಕ್ ಸೊಹೈಲ್, ಮಸೂದ್‌ನ ಪತ್ನಿಯ ಸಹೋದರನಾಗಿದ್ದು, ಸೊಹೈಲ್ ಜೊತೆಯಲ್ಲಿ ಅಫು ಮತ್ತು ಜಬೀರ್ ಎಂದು ಗುರುತಿಸಲಾದ ಆತನ ಸಹಚರರು ಈ ಕೃತ್ಯ ಎಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳು ಮಸೂದ್ ಮೇಲೆ ಕಬ್ಬಿಣದ ರಾಡ್‌ಗಳು ಮತ್ತು ಜಿಮ್ ಉಪಕರಣಗಳಿಂದ ಹಲ್ಲೆ ನಡೆಸಿದ್ದಾರೆ. ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ಮಸೂದ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ಕೊಲೆಗೆ ದೀರ್ಘಕಾಲದ ಕೌಟುಂಬಿಕ ಕಲಹಗಳೇ ಕಾರಣವಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಕೊಲೆಯ ಹಿಂದಿನ ನಿಖರವಾದ ಕಾರಣವನ್ನು ತಿಳಿಯಲು ಪೊಲೀಸರು ಎಲ್ಲಾ ಸಂಗತಿಗಳನ್ನು ಪರಿಶೀಲಿಸುತ್ತಿದ್ದಾರೆ ಮತ್ತು ಸಾಕ್ಷಿಗಳ ಹೇಳಿಕೆಗಳನ್ನು ಪಡೆಯುತ್ತಿದ್ದಾರೆ. ಕೊಲೆಯಲ್ಲಿ ಭಾಗಿಯಾಗಿರುವ ಎಲ್ಲರನ್ನು ಪತ್ತೆಹಚ್ಚಿ ಬಂಧಿಸಲು ವಿಶೇಷ ತಂಡಗಳನ್ನು ರಚಿಸಲಾಗಿದೆ ಎಂದು ಹೆಚ್ಚುವರಿ ಡಿಸಿಪಿ ಕೃಷ್ಣ ಗೌಡ್ ಅವರು ಹೇಳಿದ್ದಾರೆ.




