November 21, 2024

ಕೋಟಾ: ಕೊರಗ ಸಮುದಾಯದ ಮೇಲೆ ಪೋಲಿಸ್ ದೌರ್ಜನ್ಯ:
ಬೆಳ್ತಂಗಡಿಯಲ್ಲಿ ಖಂಡನಾ ನಿರ್ಣಯ

0

ಬೆಳ್ತಂಗಡಿ: ರಾಜ್ಯದ ಸಮಾಜ ಕಲ್ಯಾಣ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ತವರೂರು, ಅವಿಭಜಿತ ದ.ಕ ಜಿಲ್ಲೆಯ ಕೋಟಾ ಗ್ರಾಮದ ಕೋಟತಟ್ಟು ಕೊರಗ ಕಾಲನಿಯಲ್ಲಿ ನಡೆದ ಮೆಹಂದಿ ಕಾರ್ಯಕ್ರಮದಲ್ಲಿ ಅನಾಗರಿಕರಂತೆ ವರ್ತಿಸಿ, ಪೋಲಿಸ್ ಲಾಠಿ ಪ್ರಹಾರ ನಡೆಸಿದ ಕ್ರಮವನ್ನು ಖಂಡಿಸಿ ಒಮ್ಮತದ ನಿರ್ಣಯ ಕೈಗೊಳ್ಳಲಾಯಿತು.

ಬೆಳ್ತಂಗಡಿ ತಹಶೀಲ್ದಾರ್ ಮಹೇಶ್ ಜೆ ಅಧ್ಯಕ್ಷತೆಯಲ್ಲಿ ಮಿನಿ ವಿಧಾನಸೌಧದ ಸಭಾಂಗಣದಲ್ಲಿ ನಡೆದ ಪ.ಜಾತಿ/ಪಂಗಡಗಳ ಸಭೆಯಲ್ಲಿ ಚರ್ಚೆ ನಡೆದು ನಿರ್ಣಯ ಕೈಗೊಳ್ಳಲಾಯಿತು.

ಸಭೆಯ ಆರಂಭದಲ್ಲಿ ವಿಷಯ ಪ್ರಸ್ತಾಪಿಸಿದ ದಲಿತ ಹಕ್ಕುಗಳ ಸಮಿತಿ ಅಧ್ಯಕ್ಷ ಶೇಖರ್ ಲಾಯಿಲ, ಕೋಟತಟ್ಟು ಕೊರಗ ಕಾಲನಿಯ ಪ್ರಕರಣದಿಂದ ನಾಗರಿಕ ಸಮಾಜ ತಲೆ ತಗ್ಗಿಸುವಂತಾಗಿದೆ. ಘಟನೆ ಬಳಿಕ ಸಬ್ ಇನ್ಸ್ಪೆಕ್ಟರ್ ಅವರನ್ನು ಅಮಾನತು ಮಾಡಿ, ಉಳಿದ ಸಿಬ್ಬಂದಿಗಳನ್ನು ವರ್ಗಾವಣೆ ಮಾಡಿ ಪ್ರಕರಣವನ್ನು ದಾರಿ ತಪ್ಪಿಸಲಾಗುತ್ತಿದೆ ಎಂದು ಆರೋಪಿಸಿದ ಅವರು, ಸಬ್ ಇನ್ಸ್ಪೆಕ್ಟರ್ ಹಾಗೂ ಸಿಬ್ಬಂದಿಗಳ ಮೇಲೆ ದಲಿತ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿ, ಜೈಲಿಗಟ್ಟಬೇಕು ಎಂದರು.

ದಸಂಸ (ಅಂಬೇಡ್ಕರ್ ವಾದ) ಸಂಚಾಲಕ ನೇಮಿರಾಜ್ ಕಿಲ್ಲೂರು ಮಾತನಾಡಿ ಇದು ಉತ್ತರ ಪ್ರದೇಶದಲ್ಲಿ ದಲಿತರ ಮೇಲೆ ನಡೆಯುವ ದೌರ್ಜನ್ಯವನ್ನು ನೆನಪಿಸುತ್ತಿದೆ. ದಲಿತರು ಡಿಜೆ ಹಾಕುವುದು ತಪ್ಪೇ ಎಂದು ಪ್ರಶ್ನಿಸಿದರು. ಬೆಳ್ತಂಗಡಿ ತಾಲೂಕಿನಾದ್ಯಂತ ದಲಿತರ ಮೇಲೆ ನಿರಂತರ ದಾಳಿ, ದೌರ್ಜನ್ಯಗಳು ಮಿತಿಮೀರಿದೆ, ತಾಲೂಕು ಆಡಳಿತ ಮೌನವಾಗಿದೆ ಎಂದು ದಸಂಸ (ಅಂಬೇಡ್ಕರ್ ವಾದ) ಮೈಸೂರು ವಿಭಾಗೀಯ ಸಂ.ಸಂಚಾಲಕ ಬಿ.ಕೆ ವಸಂತ ಆರೋಪಿಸಿದರು.

ಶಿಶಿಲದಲ್ಲಿ ದಲಿತ ಸಮುದಾಯದ ವಿಕಲಾಂಗ ಚೇತನ ಯುವಕನ ಮೇಲೆ ಪೋಲಿಸ್ ದೌರ್ಜನ್ಯ, ಕೊಕ್ರಾಡಿಯಲ್ಲಿ ಅಂಡಿಂಜೆ ಪಂಚಾಯತ್ ನಿಂದ ರಿಕ್ಷಾ ನಿಲ್ದಾಣದ ನೆಪದಲ್ಲಿ ದಲಿತರ ಭೂಮಿ ಕಬಳಿಕೆ ವಿಚಾರ ಪ್ರಸ್ತಾಪಿಸಿದರು. ಅಂಡಿಂಜೆ ಪಿಡಿಓ ಕಾನೂನು ಬಾಹಿರವಾಗಿ ಯಾರಾದೋ ಒತ್ತಡದಿಂದ ಕೆಲಸ ಮಾಡುತ್ತಿದ್ದು, ಅವರ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸಬೇಕು ಎಂದು ಸಭೆಯಲ್ಲಿದ್ದ ತಾ.ಪಂ ಕಾರ್ಯನಿರ್ವಾಹಣಾಧಿಕಾರಿ ಅವರನ್ನು ಒತ್ತಾಯಿಸಿದರು.

ಹಿರಿಯ ದಲಿತ ಮುಖಂಡ, ಮಾಲಾಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಬೇಬಿ ಸುವರ್ಣ ಮಾತನಾಡಿ ದಲಿತ ಸಮುದಾಯದ ಯಾವುದೇ ರೀತಿಯ ಜಮೀನನ್ನು ಭೂಪರಿವರ್ತನೆ ಮಾಡಬಾರದು ಎಂಬ ರಾಜ್ಯ ಸರ್ಕಾರದ ನಿರ್ಧಾರ ಅವಿವೇಕಿತನದಿಂದ ಕೂಡಿದೆ. ಸರ್ಕಾರದ ಈ ನಿರ್ಧಾರದಿಂದ ದಲಿತರರು ಕನಿಷ್ಠ ವಾಸದ ಮನೆಯನ್ನು ನಿರ್ಮಾಣ ಮಾಡಲು ಅಸಾಧ್ಯವಾಗಿದೆ. ಭೂಪರಿವರ್ತನೆ ಮಾಡದೆ ಗ್ರಾಮ ಪಂಚಾಯತ್ ಮನೆ ನಿರ್ಮಾಣಕ್ಕೆ ಅನುಮತಿ ನೀಡುವುದಿಲ್ಲ. ದಲಿತ ಸಮುದಾಯ ಮನೆ ನಿರ್ಮಾಣ ಮಾಡಬಾರದೇ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಈ ಬಗ್ಗೆ ಸರ್ಕಾರದ ಗಮನ ಸೆಳೆಯಲಾಗುವುದು ಎಂದು ತಹಶೀಲ್ದಾರ್ ತಿಳಿಸಿದರು.

ದಸಂಸ ಮುಖಂಡರಾದ ಸಂಜೀವ ಆರ್ ಮಾತನಾಡಿ ಹಿಂದುಳಿದ ವರ್ಗಗಳ ವಸತಿ ನಿಲಯಗಳಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಮಾತ್ರವಲ್ಲದೆ ಸರ್ಕಾರದ ನಿಯಮಾನುಸಾರ ವಿದ್ಯಾರ್ಥಿಗಳಿಗೆ ಸಿಗುವ ಸವಲತ್ತುಗಳನ್ನು ವಂಚಿಸಲಾಗುತ್ತಿದೆ. ಸೋಪ್, ಎಣ್ಣೆ ಸೇರಿದಂತೆ ಅಗತ್ಯ ವಸ್ತುಗಳನ್ನು ವಿದ್ಯಾರ್ಥಿಗಳಿಗೆ ನೀಡುತ್ತಿಲ್ಲ ಎಂದು ಆರೋಪಿಸಿದರು. ಸಭೆಗೆ ಗೈರುಹಾಜರಿಯಾಗಿದ್ದ ಹಿಂದುಳಿದ ವರ್ಗಗಳ ಇಲಾಖೆಯ ಅಧಿಕಾರಿಯನ್ನು ಸಭೆಗೆ ಕರೆಸಲಾಯಿತು. ಈ ಹಿಂದೆ ಸಮಸ್ಯೆಯಾಗಿದ್ದು ನಿಜ, ನಮ್ಮ ಇಲಾಖೆಯ ಆಯುಕ್ತರ ಅನುಮತಿಯಂತೆ ಟೆಂಡರ್ ದಾರರ ಬದಲಾಗಿ ಸ್ಥಳೀಯ ಅಂಗಡಿ ಖರೀದಿಸಿ, ವಿದ್ಯಾರ್ಥಿಗಳಿಗೆ ನೀಡಲಾಗುವುದು ಎಂದು ಅಧಿಕಾರಿ ಸಭೆಗೆ ಮಾಹಿತಿ ನೀಡಿದರು.

ಹಿಂದುಳಿದ ವರ್ಗಗಳ ಇಲಾಖೆಯ ಅಧಿಕಾರಿ ವಿದ್ಯಾರ್ಥಿಗಳು ಸೇರಿದಂತೆ ಸಿಬ್ಬಂದಿಗಳ ಜೊತೆಗೆ ತೀರ ಒರಟಾಗಿ ವರ್ತಿಸುತ್ತಿದ್ದಾರೆ ಎಂದು ಬಿ.ಕೆ ವಸಂತ ಹಾಗೂ ಬೇಬಿ ಸುವರ್ಣ ಆರೋಪಿಸಿದರು. ಇದಕ್ಕೆ ಉತ್ತರಿಸಿದ ತಹಶೀಲ್ದಾರ್ ಇನ್ನೂ ಮುಂದೆ ಇಂತಹ ಘಟನೆ ನಡೆಯಬಾರದು ಎಂದು ಅಧಿಕಾರಿಗೆ ತಾಕೀತು ಮಾಡಿದರು. ಅಂಬೇಡ್ಕರ್ ಭವನಕ್ಕೆ ವಿವಿಧ ಗ್ರಾಮಗಳಲ್ಲಿ ಮೀಸಲಿಟ್ಟ ಜಮೀನುಗಳಿಗೆ ಅರಣ್ಯ ಇಲಾಖೆಯ ಆಕ್ಷೇಪಣೆಯನ್ನು ಬಲವಾಗಿ ಖಂಡಿಸಿ, ಶ್ರೀಮಂತ ಭೂಮಾಲೀಕರು ಅರಣ್ಯ ಜಮೀನು, ಸರ್ಕಾರಿ ಜಮೀನು ಒತ್ತುವರಿ ಮಾಡಿದರೂ ಚಕಾರವೆತ್ತದ ಅರಣ್ಯ, ಕಂದಾಯ ಇಲಾಖೆ ಅಂಬೇಡ್ಕರ್ ಭವನದ ಜಮೀನಿನಲ್ಲಿ ಚೆಲ್ಲಾಟವಾಡುತ್ತಿದೆ ಎಂದು ಆರೋಪಿಸಿದರು.

ತಾಲೂಕಿನ ಕರಂಬಾರು, ಬಜಿರೆ, ಹೊಸಂಗಡಿ, ಕಾಶಿಪಟ್ಣ, ಬಡಗಕಾರಂದೂರು, ಸುಲ್ಕೇರಿಮೊಗ್ರು ಗ್ರಾಮಗಳ ವಿಚಾರ ಪ್ರಸ್ತಾಪಿಸಿದರು. ದಸಂಸ ಅಂಬೇಡ್ಕರ್ ವಾದ ದ ಕೋಶಾಧಿಕಾರಿ ಬಿ ಕೆ ಶೇಖರ್ ಮಾತನಾಡಿ ಕಣಿಯೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಅಂಬೇಡ್ಕರ್ ಭವನಕ್ಕೆ ಮಂಜೂರುಗೊಂಡ ಜಮೀನಿಗೆ ಕೆಲವರು ಆಕ್ಷೇಪಣೆ ಸಲ್ಲಿಸಿದ್ದಾರೆ. ಮಂಜೂರುಗೊಂಡ ಸ್ಥಳದಲ್ಲಿಯೇ ಅಂಬೇಡ್ಕರ್ ಭವನ ನಿರ್ಮಾಣವಾಗದಿದ್ದರೆ ಹೋರಾಟ ನಡೆಸಬೇಕಾಗುತ್ತದೆ ಎಂದು ಆರೋಪಿಸಿದರು.

ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿ ನೂರಾರು ವರ್ಷಗಳ ರಸ್ತೆಯನ್ನು ರಿಪೇರಿ ಮಾಡಿದ ಕಾರಣಕ್ಕಾಗಿ ಕ್ರಿಮಿನಲ್ ಕೇಸ್ ದಾಖಲಿಸಿ ಮಲೆಕುಡಿಯ ಯುವಕರ ಮೇಲೆ ದೌರ್ಜನ್ಯ ನಡೆಸುವ ವನ್ಯಜೀವಿ ಅರಣ್ಯ ಇಲಾಖೆಯ ಕ್ರಮ ಅಮಾನವೀಯವಾದುದು, ಅರಣ್ಯ ಹಕ್ಕು ಕಾಯ್ದೆಯನ್ನು ತಮಗೆ ಬೇಕಾದ ರೀತಿಯಲ್ಲಿ ದುರುಪಯೋಗ ಮಾಡಿಕೊಂಡು ಮಲೆಕುಡಿಯ ಸಮುದಾಯವನ್ನು ವಂಚಿಸಲಾಗುತ್ತಿದೆ ಎಂದು ಶೇಖರ್ ಲಾಯಿಲ ಆರೋಪಿಸಿದರು. ಡಿಸಿ ಮನ್ನಾ ಜಮೀನಿನ ವಿಚಾರದಲ್ಲಿ ಮಾತನಾಡಿದ ನಾಗರಿಕ ಸೇವಾ ಟ್ರಸ್ಟ್ ನ ಬಾಬು ಎ ರವರು ತಾಲೂಕಿನಾದ್ಯಂತ ದಲಿತರಿಗೆ ಮೀಸಲಿಟ್ಟ ಜಮೀನನ್ನು ಶ್ರೀಮಂತರು, ಶಿಕ್ಷಣ ಸಂಸ್ಥೆಗಳು ಒತ್ತುವರಿ ಮಾಡಿದರೂ ತಾಲೂಕು ಆಡಳಿತ ಮೌನವಹಿಸಿದೆ ಎಂದು ಆರೋಪಿಸಿದ ಅವರು ದಲಿತ ಸಮುದಾಯದ ಹಕ್ಕನ್ನು ಕಸಿಯುವವರ ವಿರುದ್ಧ ಬೀದಿಗಳಿದು ಹೋರಾಟ ನಡೆಸುವುದು ಅನಿವಾರ್ಯವಾಗಿದೆ ಎಂದರು.

ಶೇಖರ್ ಲಾಯಿಲ ಮಾತನಾಡಿ ಅಧಿಕಾರಿಗಳು ಶ್ರೀಮಂತರ ಗುಮಾಸ್ತರಾಗಿ ಕೆಲಸ ಮಾಡುವುದನ್ನು ಬಿಟ್ಟರೆ ಡಿಸಿ ಮನ್ನಾ, ಸರ್ಕಾರಿ ಜಮೀನು ಒತ್ತುವರಿ ತಡೆಯಲು ಸಾಧ್ಯವಿದೆ. ಆದರೆ ಅಧಿಕಾರಿಗಳ ಅಸಡ್ಡೆ, ಇಚ್ಛಾಶಕ್ತಿ ಕೊರತೆ ಶ್ರೀಮಂತರಿಗೆ ವರದಾನವಾಗಿದೆ ಎಂದರು. ಬೆಳ್ತಂಗಡಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ರೆಂಕೆದಗುತ್ತು ಸಮೀಪ 40 ಕ್ಕೂ ಹೆಚ್ಚು ಕುಟುಂಬಗಳು ವಾಸವಿರುವ ಪ್ರದೇಶದಲ್ಲಿ ಅವೈಜ್ಞಾನಿಕವಾಗಿ ದ್ರವ ರೂಪದ ತ್ಯಾಜ್ಯ ಘಟಕ ನಿರ್ಮಾಣಕ್ಕೆ ಮುಂದಾಗಿರುವುದನ್ನು ತಕ್ಷಣ ನಿಲ್ಲಿಸಬೇಕು ‌. ಯಾವುದೇ ಕಾರಣಕ್ಕೂ ಈ ಪ್ರದೇಶದಲ್ಲಿ ಯಾವುದೇ ತ್ಯಾಜ್ಯ ಘಟಕ ನಿರ್ಮಾಣಕ್ಕೆ ಅವಕಾಶ ನೀಡಲ್ಲ ಎಂದರು. ಶೌಚಾಲಯದ ದ್ರವವನ್ನು ವಿಂಗಡಿಸಿ, ಗೊಬ್ಬರ ಹಾಗೂ ಇನ್ನುಳಿದ ನೀರನ್ನು ಸಂಸ್ಕರಣೆ ಮಾಡಿ ಕೃಷಿ ಚಟುವಟಿಕೆಗೆ ಬಳಸಲಾಗುತ್ತದೆ ಎಂದು ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಸುಧಾಕರ ತಿಳಿಸಿದರು.

ವೇದಿಕೆಯಲ್ಲಿ ತಾಲೂಕು ಪಂಚಾಯತ್ ಕಾರ್ಯನಿರ್ವಾಹಣಾಧಿಕಾರಿ ಕುಸುಮಾಧರ್ ಉಪಸ್ಥಿತರಿದ್ದರು. ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಹೇಮಚಂದ್ರ ಬಬ್ಬುಕಟ್ಟೆ ಸ್ವಾಗತಿಸಿ, ಗಿರಿಜನ ಅಭಿವೃದ್ಧಿ ಯೋಜನೆಯ ವಿಸ್ತಾರಣಾಧಿಕಾರಿ ಹೇಮಾಲತಾ ವಂದಿಸಿದರು. ಸಮಾಜ ಕಲ್ಯಾಣ ಇಲಾಖೆಯ ಮೇನೆಜರ್ ಧನಂಜಯ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!