June 9, 2026

ಮಂಗಳೂರು: ಶೆಟ್ಟಿ, ಬಿಲ್ಲವ ಜಾತಿಯ ಬಗ್ಗೆ ಪ್ರಚೋದನಕಾರಿ ಹೇಳಿಕೆ: ಅನಿತಾ ಕಾಸರಗೋಡು ವಿರುದ್ಧ ಪ್ರಕರಣ ದಾಖಲು

0
image_editor_output_image820972419-1780987745543.jpg

ಮಂಗಳೂರು: ಕರಾವಳಿಯ ಪ್ರಮುಖ ಸಮುದಾಯಗಳಾದ ಬಂಟ (ಶೆಟ್ಟಿ) ಮತ್ತು ಬಿಲ್ಲವ ಜಾತಿಗಳನ್ನು ಗುರಿಯಾಗಿಸಿ ಸಾಮಾಜಿಕ ಜಾಲತಾಣಗಳಲ್ಲಿ ಅತ್ಯಂತ ಅವಮಾನಕಾರಿ ಹಾಗೂ ಪ್ರಚೋದನಕಾರಿ ಹೇಳಿಕೆ ನೀಡಿರುವ ಆರೋಪದ ಮೇಲೆ ಅನಿತಾ ಕಾಸರಗೋಡು ಎಂಬ ಮಹಿಳೆಯ ವಿರುದ್ಧ ಇಲ್ಲಿನ ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಾಮಾಜಿಕ ಸಂಘಟನೆ ‘ಬಿರುವೆರ್ ಕುಡ್ಲ’ದ ರಾಕೇಶ್ ಎಂಬುವವರು ಈ ಕುರಿತು ಬರ್ಕೆ ಪೊಲೀಸ್ ಠಾಣೆಗೆ ಅಧಿಕೃತ ದೂರು ನೀಡಿದ್ದಾರೆ.

ದೂರಿನ ವಿವರಗಳ ಪ್ರಕಾರ, ಆರೋಪಿ ಅನಿತಾ ಕಾಸರಗೋಡು ಎಂಬಾಕೆ ತನ್ನ ಫೇಸ್‌ಬುಕ್ ಖಾತೆಯಲ್ಲಿ ವೀಡಿಯೊವೊಂದನ್ನು ಹರಿಬಿಟ್ಟಿದ್ದಾಳೆ. ಅದರಲ್ಲಿ, “ಶೆಟ್ಟಿ ಮತ್ತು ಬಿಲ್ಲವ ಜಾತಿಯವರಷ್ಟು ಹಲ್ಕಟ್ ಬೇರೆ ಯಾರೂ ಇಲ್ಲ. ಇವರಿಗಿಂತ ಮುಸ್ಲಿಮರೇ ವಾಸಿ, ಏನಾದರೂ ಸಹಾಯ ಮಾಡುತ್ತಾರೆ” ಎಂದು ಬಹಿರಂಗವಾಗಿ ನಿಂದಿಸಿದ್ದಾಳೆ.

ಈ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿದ್ದು, ಸಮಾಜದಲ್ಲಿ ಜಾತಿಗಳ ಮಧ್ಯೆ ವೈಷಮ್ಯ ಮೂಡಿಸಲು ಮತ್ತು ಪ್ರಚೋದನಕಾರಿ ರೀತಿಯಲ್ಲಿ ಜನರನ್ನು ಎತ್ತಿಕಟ್ಟಲು ಸಂಚು ರೂಪಿಸಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ದೂರನ್ನು ಗಂಭೀರವಾಗಿ ಪರಿಗಣಿಸಿರುವ ಬರ್ಕೆ ಠಾಣೆಯ ಪೊಲೀಸರು, ಸಾರ್ವಜನಿಕ ಶಾಂತಿ ಕದಡುವಿಕೆ ಮತ್ತು ಕೋಮು ಸೌಹಾರ್ದತೆಗೆ ಧಕ್ಕೆ ತಂದ ಆರೋಪದ ಮೇಲೆ ಅನಿತಾ ಕಾಸರಗೋಡು ವಿರುದ್ಧ ಬಿಎನ್‌ಎಸ್ (ಭಾರತೀಯ ನ್ಯಾಯ ಸಂಹಿತೆ) ಕಲಂ 196, 353(2) ಮತ್ತು 352 ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!