June 9, 2026

ಕಾರ್ಕಳ: ಫೇಸ್‌ಬುಕ್‌ನಲ್ಲಿ ಪ್ರಿಯಾಂಕ್‌ ಖರ್ಗೆ ವಿರುದ್ಧ ಜೀವ ಬೆದರಿಕೆ: ಓರ್ವ ಆರೋಪಿಯ ಬಂಧನ

0
image_editor_output_image-39830145-1780907956988.jpg

ಕಾರ್ಕಳ: ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ರಾಜ್ಯ ಗೃಹ ಸಚಿವ ಪ್ರಿಯಾಂಕ್‌ ಖರ್ಗೆ ಅವರ ವಿರುದ್ಧ ಅವಹೇಳನಕಾರಿಯಾಗಿ ನಿಂದಿಸಿ, ಜಾತಿನಿಂದನೆ ಮಾಡಿ ಜೀವ ಬೆದರಿಕೆಯೊಡ್ಡಿರುವ ಗಂಭೀರ ಆರೋಪದಡಿಯಲ್ಲಿ ಕಾರ್ಕಳ ನಗರ ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿದ್ದಾರೆ.

ಕಾರ್ಕಳ ತಾಲೂಕಿನ ಕೇರ್ವಾಶೆ ನಲ್ಕೆದಬೆಟ್ಟು ನಿವಾಸಿ ಸುಧೀರ ಬಂಗೇರ (48) ಬಂಧಿತ ಆರೋಪಿಯಾಗಿದ್ದಾನೆ. ಸಾಮಾಜಿಕ ಜಾಲತಾಣದಲ್ಲಿ ಶಾಂತಿ ಮತ್ತು ಸಾಮರಸ್ಯಕ್ಕೆ ಭಂಗ ತರಲು ಯತ್ನಿಸಿದ ಹಾಗೂ ದಲಿತ ಸಚಿವರಿಗೆ ನಿಂದನೆ ಮಾಡಿದ ಆರೋಪದ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ.

ಇತ್ತೀಚೆಗೆ ‘ನಮ್ಮ ಕಾರ್ಲ’ ಎಂಬ ಫೇಸ್‌ಬುಕ್‌ ಪೇಜ್‌ನಲ್ಲಿ ಸಚಿವ ಪ್ರಿಯಾಂಕ್‌ ಖರ್ಗೆ ಅವರ ಫೋಟೊ ಹಾಗೂ ಅವರ ಹೇಳಿಕೆಯೊಂದನ್ನು ಪೋಸ್ಟ್ ಮಾಡಲಾಗಿತ್ತು. ಅದರಲ್ಲಿ, “ಆರೆಸ್ಸೆಸ್‌ ಇನ್ನು ಎರಡು ವರ್ಷಗಳ ಅವಧಿ ಕೋಮು ವಾದವನ್ನು ಉಸಿರಾಡುವುದಿಲ್ಲ. ಕಾರಣ ಗೃಹಮಂತ್ರಿ ಸ್ಥಾನದಲ್ಲಿ ಸೌಮ್ಯ ಸ್ವಭಾವದ ಸಚಿವರಿಲ್ಲ” ಎಂಬ ಒಕ್ಕಣೆಯಿತ್ತು. ಈ ಪೋಸ್ಟ್‌ಗೆ ಜೂನ್ 6 ರಂದು ಪ್ರತಿಕ್ರಿಯಿಸಿದ್ದ ಆರೋಪಿ ಸುಧೀರ್ ಬಂಗೇರ, ಸಚಿವರ ವಿರುದ್ಧ ಅತ್ಯಂತ ಅವಹೇಳನಕಾರಿಯಾಗಿ ಕಮೆಂಟ್ ಮಾಡಿದ್ದಲ್ಲದೆ, ಜಾತಿನಿಂದನೆ ಮಾಡಿ ಜೀವ ಬೆದರಿಕೆ ಹಾಕಿದ್ದ ಎನ್ನಲಾಗಿದೆ.

ಸುಧೀರ ಬಂಗೇರನ ಈ ಕಮೆಂಟ್ ಸಾಮಾಜಿಕ ಸಾಮರಸ್ಯಕ್ಕೆ ಹಾನಿ ಮಾಡುವಂತಿದೆ ಮತ್ತು ದಲಿತ ಸಮುದಾಯದ ಸಚಿವರಿಗೆ ಅಪಮಾನ ಮಾಡಿದೆ ಎಂದು ಆರೋಪಿಸಿ ಕಾರ್ಕಳ ನಿಟ್ಟೆ ಅತ್ತೂರಿನ ನಿವಾಸಿ ಸುರೇಶ ಚೇತನಹಳ್ಳಿ ಅವರು ಕಾರ್ಕಳ ನಗರ ಪೊಲೀಸ್ ಠಾಣೆಗೆ ಅಧಿಕೃತ ದೂರು ನೀಡಿದ್ದರು. ದೂರಿನ ಅನ್ವಯ ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಆರೋಪಿ ಸುಧೀರ ಬಂಗೇರನನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಮುಂದಿನ ಕಾನೂನು ತನಿಖೆ ಮುಂದುವರಿದಿದೆ.

Leave a Reply

Your email address will not be published. Required fields are marked *

error: Content is protected !!