June 7, 2026

ವಿಟ್ಲ: ಮಂಗಳೂರು ರಸ್ತೆಯ ಬೊಬ್ಬೆಕೇರಿ ರಸ್ತೆ ಕಾಮಗಾರಿ ಆರಂಭ ಹಿನ್ನೆಲೆ: 3 ತಿಂಗಳ ವರೆಗೆ ಬದಲಿ ರಸ್ತೆ ಬಳಸಲು ಜಿಲ್ಲಾಧಿಕಾರಿ ಆದೇಶ

0
IMG-20260607-WA0000.jpg

ವಿಟ್ಲ: ಪುತ್ತೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಕಡೂರು-ಕಾಂಞಂಗಾಡ್ ರಾಜ್ಯ ಹೆದ್ದಾರಿಯ ವಿಟ್ಲ ಸಮೀಪದ ಬೊಬ್ಬೆಕೇರಿ ಎಂಬಲ್ಲಿ ರಸ್ತೆ ಪುನರ್ ನಿರ್ಮಾಣ ಕಾಮಗಾರಿ ಹಮ್ಮಿಕೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಸುಗಮ ಸಂಚಾರ ಹಾಗೂ ಸಾರ್ವಜನಿಕ ಹಿತದೃಷ್ಟಿಯಿಂದ ಜೂನ್ 10 ರಿಂದ ಮುಂದಿನ 3 ತಿಂಗಳ ಅವಧಿಗೆ ಸದರಿ ರಸ್ತೆಯಲ್ಲಿ ವಾಹನ ಸಂಚಾರ ಮಾರ್ಗ ಬದಲಾವಣೆ ಮಾಡಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ದಂಡಾಧಿಕಾರಿಗಳಾದ ದರ್ಶನ್ ಎಚ್.ವಿ. ಅವರು ಅಧಿಕೃತ ಆದೇಶ ಹೊರಡಿಸಿದ್ದಾರೆ.

ಲೋಕೋಪಯೋಗಿ ಇಲಾಖೆ ಬಂಟ್ವಾಳ ಉಪವಿಭಾಗದ ಮನವಿ ಹಾಗೂ ಮಂಗಳೂರು ಉಪವಿಭಾಗಾಧಿಕಾರಿಗಳ ವರದಿ ಆಧಾರಿಸಿ ಈ ಕೆಳಗಿನಂತೆ ಬದಲಿ ಮಾರ್ಗಗಳನ್ನು ನಿಗದಿಪಡಿಸಲಾಗಿದೆ.

ಬದಲಿ ಸಂಚಾರ ಮಾರ್ಗಗಳ ವಿವರ:
ಲಘು ವಾಹನಗಳಿಗೆ (ದ್ವಿಚಕ್ರ, ನಾಲ್ಕು ಚಕ್ರದ ವಾಹನ ಹಾಗೂ ಬಸ್‌ಗಳು): ಸಾರಡ್ಕ ಮತ್ತು ವಿಟ್ಲ ಕಡೆಯಿಂದ ಮಂಗಳಪದವು, ಕಲ್ಲಡ್ಕ ಕಡೆಗೆ ಸಂಚರಿಸುವ ದ್ವಿಚಕ್ರ, ನಾಲ್ಕು ಚಕ್ರದ ವಾಹನಗಳು ಹಾಗೂ ಬಸ್‌ಗಳು ವಿಟ್ಲ ನಾಲ್ಕು ಮಾರ್ಗ ಜಂಕ್ಷನ್ ಬಳಿ ಇರುವ ಬದ್ರಿಯಾ ಟೆಕ್ಸ್‌ಟೈಲ್ಸ್ ರಸ್ತೆಯಾಗಿ ಅನಂತೇಶ್ವರ, ಪಂಚಲಿಂಗೇಶ್ವರ, ಅಯ್ಯಪ್ಪ ದೇವಸ್ಥಾನ ಹಾಗೂ ಸುರಕ್ಷಾ ಆಸ್ಪತ್ರೆ ಮಾರ್ಗವಾಗಿ ಬೊಬ್ಬೆಕೇರಿ ತಲುಪಿ ಮುಂದೆ ಸಾಗಬೇಕು.

ಕಲ್ಲಡ್ಕ ಕಡೆಯಿಂದ ಬರುವ ವಾಹನಗಳು: ಕಲ್ಲಡ್ಕ ಕಡೆಯಿಂದ ವಿಟ್ಲಕ್ಕೆ ಆಗಮಿಸುವ ಎಲ್ಲಾ ವಾಹನಗಳಿಗೆ ಪ್ರಸ್ತುತ ಇರುವ ಹಳೆಯ ರಸ್ತೆಯಲ್ಲೇ ಏಕಮುಖ ಸಂಚಾರಕ್ಕೆ (One-way) ಅವಕಾಶ ಕಲ್ಪಿಸಲಾಗಿದೆ.

ಭಾರಿ ಘನ ವಾಹನಗಳಿಗೆ ನಿಷೇಧ: ನಾಲ್ಕು ಮಾರ್ಗ ಜಂಕ್ಷನ್‌ನಿಂದ ದೇವಸ್ಥಾನ ರಸ್ತೆಯಾಗಿ ಬೊಬ್ಬೆಕೇರಿಗೆ ಹೋಗುವ ಮಾರ್ಗದಲ್ಲಿ ಭಾರಿ ಘನ ವಾಹನಗಳ (10 ಚಕ್ರ ಹಾಗೂ ಅದಕ್ಕಿಂತ ಮೇಲ್ಪಟ್ಟ) ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಈ ಭಾರಿ ವಾಹನಗಳು ಕಬಕ ರಸ್ತೆಯ ಮೂಲಕ ಪರ್ಯಾಯವಾಗಿ ಸಂಚರಿಸಲು ಸೂಚಿಸಲಾಗಿದೆ.

ಸದರಿ ಬದಲಿ ರಸ್ತೆ ಮಾರ್ಗಗಳಲ್ಲಿ ಸಾರ್ವಜನಿಕರ ಮಾಹಿತಿಗಾಗಿ ಅಗತ್ಯ ಸೂಚನಾ ಫಲಕಗಳನ್ನು ಅಳವಡಿಸಲು ಹಾಗೂ ಸಂಚಾರ ನಿಯಂತ್ರಣಕ್ಕೆ ಸಿಬ್ಬಂದಿಗಳನ್ನು ನಿಯೋಜಿಸಲು ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ಜಿಲ್ಲಾಧಿಕಾರಿಗಳ ಆದೇಶದಲ್ಲಿ ನಿರ್ದೇಶನ ನೀಡಲಾಗಿದೆ. ಸಾರ್ವಜನಿಕರು ಹಾಗೂ ವಾಹನ ಸವಾರರು ಈ ತಾತ್ಕಾಲಿಕ ಬದಲಾವಣೆಗೆ ಸಹಕರಿಸಬೇಕಾಗಿ ವಿನಂತಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!